ಲಕ್ನೋ, ನ. 03 (DaijiworldNews/MB) : 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಂಬೇಡ್ಕರ್ ಮನುಸ್ಮೃತಿ ಸುಟ್ಟ ಬಗ್ಗೆ ಪ್ರಶ್ನೆ ಕೇಳಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಮಿತಾಬ್ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರ್ತಿ ಬೆಝ್ವಾಡ ವಿಲ್ಸನ್ ಹಾಗೂ ನಟ ಅನೂಪ್ ಸೋನಿ ಇದ್ದರು.
6,40,000 ರೂಗಳ ಪ್ರಶ್ನೆಯಾಗಿ ಅಮಿತಾಬ್ ಅವರು, "1927 ರ ಡಿಸೆಂಬರ್ 25 ರಂದು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು?" ಎಂದು ಪ್ರಶ್ನಿಸಿದ್ದು ಇದಕ್ಕೆ ಎ) ವಿಷ್ಣು ಪುರಾಣ ಬಿ) ಭಗವದ್ಗೀತೆ, ಸಿ) ಋಗ್ವೇದ ಡಿ) ಮನುಸ್ಮೃತಿ ಎಂದು ಆಯ್ಕೆ ನೀಡಿದ್ದರು. ಇದಕ್ಕೆ ಉತ್ತರ ಮನುಸ್ಮೃತಿಯಾಗಿದೆ.
ಉತ್ತರವನ್ನು ವಿವರಿಸಿದ ಅಮಿತಾಬ್ ಬಚ್ಚನ್, ''1927 ರಲ್ಲಿ ಅಂಬೇಡ್ಕರ್ ಪ್ರಾಚೀನ ಹಿಂದೂ ಪಠ್ಯ ಮನುಸ್ಮೃತಿಯನ್ನು ಖಂಡಿಸಿದರು. ಇದರಲ್ಲಿರುವ ಜಾತಿ ವ್ಯವಸ್ಥೆಯ ವಿರುದ್ಧವಾಗಿ ಅದರ ಪ್ರತಿಗಳನ್ನು ಸುಟ್ಟುಹಾಕಿದರು'' ಎಂದು ಹೇಳಿದ್ದರು. ಹಾಗೆಯೇ ನಟ ವಿಲ್ಸನ್ ಸರಿಯಾದ ಉತ್ತರ ನೀಡಿದ್ದರಲ್ಲದೆ, ''ನಾವು ಇಂದು ಅವರಿಂದಾಗಿ ಜೀವಿಸುತ್ತಿದ್ದೇವೆ. ಅವರು ಇಡೀ ಜಗತ್ತಿಗೆ ಭ್ರಾತೃತ್ವ ಹಾಗೂ ಸಮಾನತೆಯನ್ನು ಕಲಿಸಿದ್ದಾರೆ'' ಎಂದು ಹೇಳಿದ್ದರು.
ಈ ಪ್ರಶ್ನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದ್ದು #BoycottKBC ಎಂಬ ಹ್ಯಾಷ್ಟ್ಯಾಗ್ ಉಪಯೋಗಿಸಲಾಗುತ್ತಿದೆ. ಪ್ರದರ್ಶಕರು ಎಡಪಂಥೀಯ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಕಾರ್ಯಕರ್ತರ ವಿರುದ್ದವಾಗಿಯೂ ಕೆಲವರು ಕಾಮೆಂಟ್ಗಳನ್ನು ಮಾಡುತ್ತಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.