ಬೆಂಗಳೂರು, ನ.03 (DaijiworldNews/PY): "ಇವತ್ತಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ" ಎಂದು ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜಕಾರಣಿಗೂ ಭಿಕ್ಷೆ ಬೇಡುವವನಿಗೂ ಯಾವುದೇ ರೀತಿಯಾದ ವ್ಯತ್ಯಾಸವಿಲ್ಲ. ನಾನು ಮತದಾರರ ಬಳಿ ಭಿಕ್ಷೆ ಕೇಳಿದ್ದೇನೆ. ಅವರು ಆ ಭಿಕ್ಷೆಯನ್ನು ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಭಿಕ್ಷೆ ಬೇಡುವವರು ಅಮ್ಮಾ ಊಟ ಎಂದು ಕೇಳುತ್ತಾರೆ. ಆದರೆ, ನಾವು ಅಮ್ಮಾ ಮತ ನೀಡಿ ಎಂದು ಕೇಳುತ್ತೇವೆ" ಎಂದಿದ್ದಾರೆ.
"ಕೊರೊನಾದ ಸಂದರ್ಭದಲ್ಲಿಯೂ ಕೂಡಾ ಮತದಾನ ಮಾಡುವುದು ವಿಶೇಷವಾಗಿದೆ. 18 ವರ್ಷದ ಯುವಕ ತನ್ನ ಮೊದಲ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಇಂದುನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ. ಏಕೆಂದರೆ, ಕೊರೊನಾ ಕಾರಣದಿಂದ ಚುನಾವಣಾ ಆಯೋಗ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕೊರೊನಾಕ್ಕೆ ಯಾರು ಭಯಪಡುವ ಅಗತ್ಯವಿಲ್ಲ ಎಂದು" ಹೇಳಿದ್ದಾರೆ.
"ಕ್ಷೇತ್ರದ ಮತದಾರರು ಪ್ರಜ್ಞಾವಂತ ಮತದಾರರಾಗಿದ್ದು, ಎಲ್ಲರೂ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಎಲ್ಲದ್ದಕ್ಕೂ ಸಿದ್ದವಾಗಿದ್ದು, ಜನರ ತೀರ್ಮಾನವೇ ಅಂತಿಮವಾಗಿದೆ. ಚುನಾವಣೆ ವೇಳೆ ನನ್ನ ಮೇಲೆ ಮಾಡಲಾದ ಆರೋಪಗಳಿಗೆ ಫಲಿತಾಂಶದ ದಿನ ಉತ್ತರಿಸುತ್ತೇನೆ. ಆರೋಪ ಮಾಡಿದವರು ಯಾವುದೇ ದೇವಸ್ಥಾನಕ್ಕೆ ಕರೆದರೂ ನಾನು ಬರಲು ತಯಾರು. ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ನೀಡಲು ಸಿದ್ದ" ಎಂದಿದ್ದಾರೆ.