ಬೆಂಗಳೂರು, ನ. 03 (DaijiworldNews/MB) : ''ಕರ್ನಾಟಕ ರಾಜ್ಯದಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ'' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ''ಕರ್ನಾಟಕವೂ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರಗೊಳ್ಳುವುದನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಗೆ ಧಕ್ಕೆ ತಂದಾಗ ನಾವು ಮೌನವಾಗಿರುವುದಿಲ್ಲ. ಮತಾಂತರದ ಕೃತ್ಯದಲ್ಲಿ ಭಾಗಿಯಾಗಿರುವ ಯಾರಾದರೂ ಕಠಿಣ ಮತ್ತು ತ್ವರಿತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ'' ಎಂದು ಹೇಳಿದ್ದಾರೆ.
ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ನೀಡದಂತೆ ಪೊಲೀಸರಿಗೆ ಹಾಗೂ ಮಹಿಳೆಯ ತಂದೆಗೆ ನಿರ್ದೇಶನ ನೀಡುವ ಹೊಸದಾಗಿ ವಿವಾಹವಾದ ದಂಪತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಅಲಹಾಬಾದ್ ಹೈಕೋರ್ಟ್, ''ಕೇವಲ ವಿವಾಹವಾಗುವ ಉದ್ದೇಶದಿಂದ ಆದ ಮತಾಂತರ ಮಾನ್ಯವಲ್ಲ, ಸ್ವೀಕಾರರ್ಹವಲ್ಲ'' ಎಂದು ಹೇಳಿತ್ತು.
ಇನ್ನು ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಹರಿಯಾಣ ಮುಖ್ಯಮಂತ್ರಿ ಎಂಎಲ್ ಕಟ್ಟರ್ ಲವ್ ಜಿಹಾದ್ ವಿರುದ್ದ ಕಾನೂನು ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರು. ಸೋಮವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಮ್ ಕೂಡಾ ಲವ್ ಜಿಹಾದ್ ತಡೆಗಟ್ಟಲು ರಾಜ್ಯದಲ್ಲಿ ಕಾನೂನು ರೂಪಿಸಲಾಗುವುದು ಎಂದು ಘೋಷಿಸಿದ್ದಾರೆ.