ಬೆಂಗಳೂರು, ನ. 03 (DaijiworldNews/MB) : ಕರ್ನಾಟಕ ಉಪಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾದಲ್ಲಿ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಆರ್ಆರ್ ನಗರದಲ್ಲಿ 678 ಮತಗಟ್ಟೆಗಳಲ್ಲಿ, ಶಿರಾದಲ್ಲಿ 330 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು ಕೊರೊನಾ ಸೋಂಕು ಭೀತಿಯ ನಡುವೆಯೂ ಜನರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇನ್ನು ಸಂಜೆ 5ರಿಂದ ಸಂಜೆ 6 ಗಂಟೆವರೆಗೆ ಸೋಂಕಿತರಿಗೆ ಮತ ಚಲಾಯಿಸುವ ಅವಕಾಶವನ್ನು ನೀಡಲಾಗಿದೆ.
ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಚುನಾವಣಾ ಸ್ಪರ್ಧೆ ನಡೆಯುತ್ತಿದೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಫರ್ಧೆ ನಡೆಯುತ್ತಿದೆ.
ಇನ್ನು ಆರ್ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತದಾನ ಮಾಡಿ, ''ನಾನು ನೊಂದವರಿಗೆ ಸಹಾಯಹಸ್ತ ಚಾಚುವ ಹೆಣ್ಣು ಮಗಳಿಗೆ ಮತ ನೀಡಿದ್ದೇನೆ. ನಾನು ಗೆಲ್ಲುವ ಭರವಸೆ ನನಗಿದೆ'' ಎಂದು ಹೇಳಿದ್ದಾರೆ. ಮತದಾನ ಮಾಡುವ ಮುನ್ನ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಹಾಗೆಯೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ''ಮತದಾರ ದೇವರುಗಳು ನೀಡುವ ತೀರ್ಪು ಅಂತಿಮ. ನಾನು ಮತವನ್ನು ಭಿಕ್ಷೆಯಾಗಿ ಕೇಳುತ್ತೇನೆ. ಜನರು ಅಭಿವೃದ್ದಿಗಾಗಿ ಮತ ಹಾಕುತ್ತಾರೆ ಎಂಬ ಭರವಸೆ ಇದೆ'' ಎಂದು ಹೇಳಿದ್ದಾರೆ.
ಇನ್ನು ಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾದ ಜ್ಯೋತಿ ನಗರ ಮತಗಟ್ಟೆಯಲ್ಲಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ ಮಾಡಿದರು.
ಇನ್ನು ಆರ್ಆರ್ ನಗರದಲ್ಲಿ ಕೆಲವೆಡೆ ಮತಯಂತ್ರಗಳಲ್ಲಿ ದೋಷ ಉಂಟಾಗಿದೆ ಎಂದು ವರದಿ ತಿಳಿಸಿದೆ. ಅಣುಕು ಮತದಾನ ಮಾಡುವ ಸಂದರ್ಭದಲ್ಲಿ ಕೆಲವೊಂದು ದೋಷ ಕಂಡುಬಂದಿದ್ದು ಬಳಿಕ ಸರಿಪಡಿಸಲಾಗಿದೆ. ಒಂಬತ್ತು ಕಂಟ್ರೋಲ್ ಯುನಿಟ್, 3 ವಿವಿ ಪ್ಯಾಡ್, 14 ಮತಯಂತ್ರಗಳನ್ನು ಬದಲಾಯಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಹಾಗೆಯೇ 27 ಮಂದಿ ಸೋಂಕಿತರು ಮತ ಹಾಕಲು ಒಪ್ಪಿದ್ದು ಆ ಪೈಕಿ 12 ಮಂದಿ ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಪಿಪಿಇ ಕಿಟ್ ಹಾಕಿಸಿ ಮತ ಹಾಕಿಸುತ್ತೇವೆ ಎಂದು ತಿಳಿಸಿದ್ದಾರೆ.