ಪಾಟ್ನಾ, ನ.03 (DaijiworldNews/PY): ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನ.3ರ ಮಂಗಳವಾರ ಬೆಳಗ್ಗೆ ಪ್ರಾರಂಭವಾಗಿದೆ.
ಬಿಹಾರ ರಾಜ್ಯಪಾಲ ಫಗು ಚೌಹಾಣ್ ಸೇರಿದಂತೆ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಅನೇಕ ಪ್ರಮುಖರು ಬೆಳಗ್ಗೆ ಮತ ಚಲಾಯಿಸಿದರು.
ಮತ ಚಲಾವಣೆ ಬಳಿಕ ಜನರಲ್ಲಿ ಮನವಿ ಮಾಡಿದ ಸುಶೀಲ್ ಕುಮಾರ್ ಮೋದಿ, ಅಧಿಕ ಸಂಖ್ಯೆಯಲ್ಲಿ ಜನರು ಮತ ಚಲಾಯಿಸಬೇಕು. ಮತದಾನದ ಸಂದರ್ಭ ಮಾಸ್ಕ್ ಧರಿಸಿಕೊಂಡು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಂಜಾಗ್ರತಾ ಕ್ರಮ ವಹಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದಿದ್ದಾರೆ.
ಒಟ್ಟು 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 2.85 ಕೋಟಿ ಮತದಾರರಿದ್ದಾರೆ. ಸುಮಾರು 1,463 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
94 ಕ್ಷೇತ್ರಗಳ ಪೈಕಿ 56 ಕಡೆಗಳಲ್ಲಿ ಆರ್ಜೆಡಿ, 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಇನ್ನು ಸಿಪಿಎಂ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಘಟಬಂಧನದ ಇತರ ಪಕ್ಷಗಳಿಗೆ ಉಳಿದ ಕ್ಷೇತ್ರಗಳನ್ನು ನೀಡಲಾಗಿದೆ.
46 ಕ್ಷೇತ್ರಗಳಲ್ಲಿ ಬಿಜೆಪಿ, 43 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳಿದ್ದಾರೆ. ಉಳಿದಂತೆ ಐದು ಕ್ಷೇತ್ರಗಳಲ್ಲಿ ವಿಪಿಐ ಅಭ್ಯರ್ಥಿಗಳಿದ್ದಾರೆ. ಇನ್ನು ಎರಡೂ ಬಣಗಳಿಂದ ಹೊರಕ್ಕುಳಿದಿರುವ ಎಲ್ಪಿಜಿಯು 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.