ತಿರುವನಂತಪುರ, ನ.03 (DaijiworldNews/PY): ಖ್ಯಾತ ವಯಲಿನ್ ವಾದಕ ಟಿ.ಎನ್.ಕೃಷ್ಣನ್ (92) ಅವರು ನ.2ರ ಸೋಮವಾರದಂದು ನಿಧನರಾದರು.
ಕೃಷ್ಣನ್ ಅವರು ಪ್ರಸಿದ್ದ ವಯಲಿನ್ ವಾದಕಿ ಎನ್.ರಾಜಂ ಅವರ ಸಹೋದರ. ಕೃಷ್ಣನ್ ಅವರು ಚೆನ್ನೈ ಹಾಗೂ ದೆಹಲಿಯ ಕಾಲೇಜುಗಳಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಇವರು ತಮ್ಮ ಎಳೆಯ ವಯಸ್ಸಿನಿಂದಲೇ ತಂದೆ ಎ.ನಾರಾಯಣ ಅಯ್ಯರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದು, ಬಳಿಕ ಸಂಗೀತ ದಿಗ್ಗಜ ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪಾಠ ಕಲಿಯುತ್ತಿದ್ದರು.
ಕೃಷ್ಣನ್ ಅವರ ದೀರ್ಘಕಾಲದ ಶಿಸ್ತಿನ ಶಿಕ್ಷಣದಿಂದಾಗಿ ಅವರು ಓರ್ವ ಶ್ರೇಷ್ಠ ಪಿಟೀಲು ವಾದಕರಾದರು. ಕೃಷ್ಣನ್ ಅವರು ತಮ್ಮ ಎಂಟನೇ ವಯಸ್ಸಿನಿಂದಲೇ ಕಛೇರಿ ಮಾಡುತ್ತಿದ್ದು, ಆಲತ್ತೂರು ಸಹೋದರರು, ವಿಶ್ವನಾಥ ಅಯ್ಯರ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮುಂತಾದ ಹಿರಿಯರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಖ್ಯಾತರಾದರು.
ಕೃಷ್ಣನ್ ಅವರು ಕೇವಲ ಮೇರು ಪಿಟೀಲು ವಾದಕರಷ್ಟೇ ಅಲ್ಲ, ಇವರು ದಕ್ಷ ಬೋಧಕರೂ ಹೌದು. ಇವರು ದೆಹಲಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಡೀನ್ ಆಗಿ ನೂರಾರು ಜನಕ್ಕೆ ಸಂಗೀತ ಶಿಕ್ಷಣ ನೀಡಿದ್ದಾರೆ.
ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಇವರು ಪದ್ಮಭೂಷಣ ಪುರಸ್ಕೃತರೂ ಹೌದು.