ನವದೆಹಲಿ, ನ.03 (DaijiworldNews/PY): ಕಾಂಗ್ರೆಸ್ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರನ್ನು ತೆಗೆದಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಸುಪ್ರೀಂ ತಡೆ ನೀಡಿದೆ.
ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಕಮಲ್ನಾಥ್ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ನ್ಯಾ.ಎಸ್.ಎ. ಬೊಬ್ಡೆ ಅವರು ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆ, "ಚುನಾವಣಾ ಆಯೋಗಕ್ಕೆ ಸ್ಟಾರ್ ಪ್ರಚಾರಕ ಪಟ್ಟಿಯಿಂದ ತೆಗೆದುಹಾಕುವ ಅಧಿಕಾರ ನೀಡಿದವರು ಯಾರು?" ಎಂದು ಕೇಳಿದ್ದಾರೆ.
"ಚುನಾವಣಾ ಆಯೋಗಕ್ಕೆ ಉಪಚುನಾವಣೆಯ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕಮಲ್ನಾಥ್ ಅವರನ್ನು ತೆಗೆದುಹಾಕುವ ಅಧಿಕಾರವಿಲ್ಲ. ಈ ತೀರ್ಮಾನವನ್ನು ಯಾರು ತೆಗೆದುಕೊಂಡಿದ್ದು, ಖುದ್ದಾಗಿ ಆಯೋಗವೇ ತೆಗೆದುಕೊಂಡಿತೋ ಅಥವಾ ಆಯೋಗಕ್ಕೆ ಪಕ್ಷದ ಅಧ್ಯಕ್ಷರು ತಿಳಿಸಿದ್ದಾರೋ?" ಎಂದು ಕೇಳಿದ್ದಾರೆ.
ಪದೇ ಪದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಕಾರಣ ಶುಕ್ರವಾರ ಚುನಾವಣಾ ಆಯೋಗವು ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕಮಲ್ನಾಥ್ ಅವರನ್ನು ತೆಗೆದುಹಾಕಿತ್ತು.