ಬೆಂಗಳೂರು, ನ.02 (DaijiworldNews/PY): "ಕಾಂಗ್ರೆಸಿಗರೇ, ಬಿಜೆಪಿಗೆ ಬಿಎಸ್ವೈ ಅವರ ಮೇಲೆ ಭರವಸೆ ಇರುವುದರಿಂದಲೇ ಸಿಎಂ ಆಗಿದ್ದಾರೆ. ಬಿಜೆಪಿಯ ಬಗ್ಗೆ ಚಿಂತೆ ಮಾಡಬೇಡಿ. ನಿಮ್ಮೊಳಗೆ ಆರಂಭವಾಗಿರುವ ಪಟ್ಟದಾಸೆಯ ಬೆಂಕಿಯತ್ತ ಗಮನ ಹರಿಸಿ" ಎಂದು ಬಿಜೆಪಿ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಕಾಂಗ್ರೆಸ್ನ ಟ್ವೀಟ್ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಿಜೆಪಿ, "ಗೌರವಾನ್ವಿತ ಕಾಂಗ್ರೆಸ್, ಮಂಗನ ಕೈಗೆ ಮಾಣಿಕ್ಯ ಅಂದರೆ, ಜೆಡಿಎಸ್ ತೊರೆದು ಬೇರೆಯವರು ಕಟ್ಟಿದ ಕಾಂಗ್ರೆಸ್ ಗೂಡಲ್ಲಿ ಮೊಟ್ಟೆ ಇಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇ? ಕಾಡುಮನುಷ್ಯ, ಅಲೆಮಾರಿ, ಬೆನ್ನೆಲುಬಿಲ್ಲದವ ಎಂದೆಲ್ಲ ಹಿಂದೆಯೂ ಹೇಳಿದ್ದಾರೆ. ನಿಮ್ಮ ಸರ್ವಜನಾಂಗದ ನಾಯಕನ ಮಾತುಗಳನ್ನು ಕೇಳಿ ಒಮ್ಮೆ" ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.
"ಪಂಪ್ವೆಲ್ ಮೇಲ್ಸೇತುವೆಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ವ್ಯವಸ್ಥಿತವಾಗಿ ಸ್ಥಳೀಯ ಶಾಸಕರ, ಪಾಲಿಕೆಯ ಮೂಲಕ ತಡೆ ಒಡ್ಡಲಾಗಿತ್ತು. ನಿದ್ದೆಯಿಂದ ಎದ್ದು ಮಾತನಾಡುವ ಚಾಳಿ ಹೊಂದಿರುವ ಸಿದ್ದರಾಮಯ್ಯ ಅವರು ಬರೀ ಹಗಲು ಕನಸು ಕಾಣುವ ನಾಯಕ. ಒಂದು ಕಡೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯ ಕನಸಿನಲ್ಲಿದ್ದಾರೆ, ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್!" ಎಂದಿದೆ.
"ಕಾಂಗ್ರೆಸಿಗರೇ, ಬಿಜೆಪಿಗೆ ಬಿಎಸ್ವೈ ಅವರ ಮೇಲೆ ಭರವಸೆ ಇರುವುದರಿಂದಲೇ ಸಿಎಂ ಆಗಿದ್ದಾರೆ. ಬಿಜೆಪಿಯ ಬಗ್ಗೆ ಚಿಂತೆ ಮಾಡಬೇಡಿ. ನಿಮ್ಮೊಳಗೆ ಆರಂಭವಾಗಿರುವ ಪಟ್ಟದಾಸೆಯ ಬೆಂಕಿಯತ್ತ ಗಮನ ಹರಿಸಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿಎಸ್ವೈ ನಡುವೆ ಉತ್ತಮ ಸಂವಹನ ಇರುವುದರಿಂದಲೇ ಯುಪಿಎ ಸರ್ಕಾರಕ್ಕಿಂತಲೂ ಹೆಚ್ಚಿನ ಅನುದಾನ ರಾಜ್ಯಕ್ಕೆ ಬಂದಿದೆ" ಎಂದು ತಿಳಿಸಿದೆ.
"ಬಿಜೆಪಿ ಪಕ್ಷ ಸಿದ್ಧಾಂತ ಆಧಾರಿತವಾಗಿ ರೂಪುಗೊಂಡಿದೆ ಹಾಗೂ ಅದರಂತೆ ಮುನ್ನಡೆಯುತ್ತಿದೆ. ಕಾಂಗ್ರೆಸ್ನಂತೆ ಒಂದು ಕುಟುಂಬದ ಅಧೀನದಲ್ಲಿಲ್ಲ ಎಂಬುದೇ ಬಿಜೆಪಿಗಿರುವ ದೊಡ್ಡ ಗೌರವ. ಕಾಂಗ್ರೆಸ್ನ ಒಬ್ಬರು - ನಾನು ಮುಖ್ಯಮಂತ್ರಿಯಾದರೆ, ಮತ್ತೊಬ್ಬರು - ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ನಿಮ್ಮ ಬಣ್ಣ ಬೀದಿಯಲ್ಲಿ ಬಯಲಾಗುತ್ತಲೇ ಇದೆ!" ಎಂದು ಹೇಳಿದೆ.