ಬ್ಲೂಮ್ಬರ್ಗ್, ನ. 02 (DaijiworldNews/HR): ಕೊರೊನಾ ಕಾರಣದಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ತ್ರೈಮಾಸಿಕ ಲಾಭಾಂಶದಲ್ಲಿ ಇಳಿಕೆ ಕಂಡಿದ್ದು, ಮುಕೇಶ್ ಅಂಬಾನಿ ಅವರ ಸಂಪತ್ತಿನಲ್ಲಿ 5 ಬಿಲಿಯನ್ ಡಾಲರ್ಗಳಷ್ಟು (ಸುಮಾರು 37,200 ಕೋಟಿ) ನಷ್ಟ ಉಂಟಾಗಿದೆ.
ಇಂದು ಷೇರುಪೇಟೆ ವಹಿವಾಟಿನಲ್ಲಿ ರಿಲಯನ್ಸ್ ಕಂಪನಿಯ ಷೇರು ಬೆಲೆ ಶೇ 8ಕ್ಕಿಂತಲೂ ಹೆಚ್ಚು ಕುಸಿದಿದೆ. ಕೊರೊನಾ ಲಾಕ್ಡೌನ್ನಿಂದ ಇಂಧನ ಬೇಡಿಕೆ ತೀವ್ರ ಇಳಿಮುಖವಾಗಿ, ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಲಾಭಾಂಶ ಶೇ. 15ರಷ್ಟು ಕಡಿಮೆಯಾಗಿ 9,570 ಕೋಟಿ (1.3 ಬಿಲಿಯನ್ ಡಾಲರ್ಗಳು) ದಾಖಲಾಗಿದೆ. ಒಟ್ಟು ಆದಾಯದಲ್ಲಿ ಶೇ 24ರಷ್ಟು ಕಡಿಮೆಯಾಗಿ 1.16 ಲಕ್ಷ ಕೋಟಿಯಾಗಿದೆ ಎಂದು ವರದಿಯಾಗಿದೆ.
ಇನ್ನು ಲಾಕ್ಡೌನ್ನಿಂದ ಜನರು ಸಾರಿಗೆ ಉಪಯೋಗಿಸದ ಕಾರಣ ತೈಲದ ಬಳಕೆ ಕನಿಷ್ಠ ಮಟ್ಟ ತಲುಪಿದ್ದು, ಇದರಿಂದ ರಿಲಯನ್ಸ್ ತೈಲ ಸಂಸ್ಕರಣ ಘಟಕದಲ್ಲಿ ಬೇಡಿಕೆ ಕುಸಿದಿದೆ. ಹಲವು ಉದ್ಯಮಗಳನ್ನು ನಡೆಸುತ್ತಿರುವ ರಿಲಯನ್ಸ್ ಲಾಕ್ಡೌನ್ ಅವಧಿಯಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದು, ಇದೀಗ ವಿದೇಶಿ ಸಂಸ್ಥೆಗಳಿಂದ ಹೂಡಿಕೆ ಪಡೆದು ಹೊಸ ದಿಕ್ಕಿನಲ್ಲಿ ಪ್ರಯಾಣ ಬೆಳೆಸಿದೆ.
ರಿಲಯನ್ಸ್ ಕಂಪನಿಯ ಡಿಜಿಟಲ್ ಮತ್ತು ರಿಟೇಲ್ ಉದ್ಯಮದ ಪಾಲುದಾರಿಕೆ ಮಾರಾಟದಿಂದ ಈ ವರ್ಷ 25 ಬಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಲಾಗಿದ್ದು, ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ 4ರಷ್ಟು ಇಳಿಕೆಯಾದರೂ ಹೂಡಿಕೆದಾರರು ರಿಲಯನ್ಸ್ ಷೇರುಗಳ ಖರೀದಿಗೆ ಒಲವು ತೋರಿದ್ದರಿಂದ ಷೇರು ಬೆಲೆ ಶೇ 29ರಷ್ಟು ಹೆಚ್ಚಳ ಕಂಡಿರುವುದಾಗಿ ವರದಿಯಾಗಿದೆ.
ಇನ್ನು ಮುಕೇಶ್ ಅಂಬಾನಿ 2020ರಲ್ಲಿ 19.1 ಬಿಲಿಯನ್ ಡಾಲರ್ ಸಂಗ್ರಹಿಸುವ ಮೂಲಕ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅಂಬಾನಿ ಜಗತ್ತಿನ 6ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.