ಹಾವೇರಿ, ನ.02 (DaijiworldNews/PY): "ಯಾರಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಲ್ಲಾಡಿಸೋಕೆ ಸಾಧ್ಯ ಇಲ್ಲ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರೋ ಬಾಯಿ ಚಟಕ್ಕೆ, ನಾಲಿಗೆ ಚಟಕ್ಕೆ ಏನೇನೋ ಹೇಳುತ್ತಾರೆ. ಈ ರೀತಿ ಹೇಳುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಎಸ್ವೈ ಅವರ ನೇತೃತ್ವದ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ" ಎಂದಿದ್ದಾರೆ.
ಬಿಜೆಪಿ ಸೇರಿರುವ ಶಾಸಕರ ಪಾಡು ನಾಯಿ ಪಾಡಾಗುತ್ತದೆ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಮಾನವರನ್ನು ಬಂಡೆ, ಹುಲಿ, ನಾಯಿಗೆ ಹೋಲಿಸುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ. ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ಸ್ಥಾನ ಅಲ್ಲಾಡುತ್ತದೆ ಎನ್ನುವ ಭಯದಿಂದ ಈ ರೀತಿಯಾಗಿ ಮಾತನಾಡುತ್ತಿದ್ದಾರೆ. ಈ ರೀತಿಯಾದ ಹೇಳಿಕೆಗಳು ಅವರ ಘನತೆಗೆ ಶೋಭೆ ತರುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಗಲು ಕನಸು ಕಾಣುವುದನ್ನು ಮೊದಲು ಬಿಡಬೇಕು" ಎಂದು ಹೇಳಿದ್ದಾರೆ.
"ಸದ್ಯ ಚುನಾವಣೆ ಇರುವ ಕಾರಣದಿಂದ ಪಕ್ಷದ ವಿರುದ್ದ ಮಾತನಾಡಿರುವ ಬಗ್ಗೆ ಕ್ರಮ ತೆಗೆದುಕೊಳ್ಳುವುದು ವಿಳಂಬವಾಗಿದೆ. ಹೈ ಕಮಾಂಡ್ ಇವರ ಮೇಲೆ ಕ್ರಮ ಕೈಗೊಳ್ಳಿದೆ" ಎಂದು ತಿಳಿಸಿದ್ದಾರೆ.