ಬಾಗಲಕೋಟೆ, 02 (DaijiworldNews/HR): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ನ ಮತ್ತಷ್ಟು ಶಾಸಕರು ಪಕ್ಷ ಬಿಡುವ ಭೀತಿ ಇದ್ದು, ಅವರು ಹತಾಶೆಗೊಂಡು ಏನೇನೋ ಹೇಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವ ಎಲ್ಲ ಶಾಸಕರಿಗೆ ಉಪ ಚುನಾವಣೆ ಬಳಿಕ ನಾಯಿ ಪಾಡು ಆಗಲಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಆದರೆ ಅವರು ಮೊದಲ ತಮ್ಮ ಸ್ಥಿತಿ ನೋಡಿಕೊಳ್ಳಲಿ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿರುವ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವ ಜತೆಗೆ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರಿಗೆ ಅನೇಕ ಕಾಂಗ್ರೆಸ್ನ ಶಾಸಕರು ಪಕ್ಷ ಬಿಡುವ ಭೀತಿ ಉಂಟಾಗಿದೆ. ಹೀಗಾಗಿ ಹತಾಶೆಗೊಂಡು ಈ ರೀತಿ ಹೇಳುತ್ತಿದ್ದಾರೆ. ನಾವಾಗಿ ಯಾವುದೇ ಕಾಂಗ್ರೆಸ್ನ ಶಾಸಕರನ್ನು ಕರೆತರುವ ಕೆಲಸ ಮಾಡುವುದಿಲ್ಲ, ಆದರೆ ನಮ್ಮ ಪಕ್ಷಕ್ಕೆ ಯಾರೇ ಬಂದರೂ ನಾವು ಅವರನ್ನು ಕರೆದುಕೊಳ್ಳುತ್ತದೆ. ಪಕ್ಷ ಬೆಳೆಯಬೇಕು, ಬಿಜೆಪಿ ಎಂದಿಗೂ ನಿಂತ ನೀರಲ್ಲ ಎಂದು ಹೇಳಿದ್ದಾರೆ.