ಮುಂಬೈ, , ನ. 02 (DaijiworldNews/MB) : ''ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವಾಗುತ್ತಿದೆ. ಹೀಗಾಗಿ ಗಡಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದ ರಾಜ್ಯಪಾಲರ ಜೊತೆಗೆ ಕಟುವಾಗಿ ಚರ್ಚಿಸಿ'' ಎಂದು ಶಿವಸೇನೆ ಮಹಾರಾಷ್ಟ್ರದ ರಾಜ್ಯಪಾಲರಿಗೆ ಆಗ್ರಹಿಸಿದೆ.
ಈ ಬಗ್ಗೆ ತನ್ನ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಶಿವಸೇನೆ, ''ಸುಮಾರು 60 ವರ್ಷಗಳಿಂದ ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವಾಗುತ್ತಿದೆ. ಕರ್ನಾಟಕ ಈ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವ ರೀತಿಯು ಸರಿಯಾಗಿಲ್ಲ ಎಂದು ಜನರು ದೂರಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರು ಕರ್ನಾಟಕ ರಾಜ್ಯಪಾಲರೊಂದಿಗೆ ಚರ್ಚಿಸಬೇಕು'' ಎಂದು ಒತ್ತಾಯಿಸಿದೆ.
''ಸೂರ್ಯ ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಭಾಗ'' ಎಂದು ಹೇಳಿದ್ದ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆಗೆ ಶಿವಸೇನೆ ತನ್ನ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲೇ ತಿರುಗೇಟು ನೀಡಿದ್ದು, ''ಪ್ರಸ್ತುತ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದ್ದು ಸೂರ್ಯ, ಚಂದ್ರ ಆಕಾಶದಲ್ಲಿ ಇದೆಯೋ ಇಲ್ಲವೋ ಎಂದು ನೋಡಿ ಕೋರ್ಟ್ ಆದೇಶ ನೀಡಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ''ಕರ್ನಾಟದ ಲಕ್ಷಾಂತರ ಮಂದಿ ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಲಕ್ಷ್ಮಣ ಸವದಿ ಅವರಂಥ ಸಚಿವರು ಮರೆಯಬಾರದು'' ಎಂದು ಹೇಳಿದೆ.
ಇನ್ನು ಕನ್ನಡ ರಾಜ್ಯೋತ್ಸವವಾದ ಭಾನುವಾರ ನವೆಂಬರ್ 1 ರಂದು ಮಹಾರಾಷ್ಟ್ರದ ಸಚಿವರು ಕಪ್ಪುಪಟ್ಟಿಯನ್ನು ಧರಿಸಿ ಕರಾಳ ದಿನ ಆಚರಿಸಿದರು.