ಬಳ್ಳಾರಿ, ನ.02 (DaijiworldNews/PY): "ಮುಖ್ಯಮಂತ್ರಿ ಆಗುವ ಕನಸಿನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ಭೀತಿ ಉಂಟಾಗಿದೆ" ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದಾರೆ.
"ಮುಖ್ಯಮಂತ್ರಿ ಬಿಎಸ್ವೈ ಅವರು ಪುತ್ರ ಬಿ.ವೈ.ವಿಜಯೇಂದ್ರ ಅವರು ಹೋದ ಕಡೆ ಸೋಲು ಇಲ್ಲ. ಶಿರಾದ ಜನತೆ ಬಿಜೆಪಿಗೆ ಮತ ನೀಡಲಿದ್ದಾರೆ. ಕಾಂಗ್ರೆಸ್ ಒಳ ಜಗಳದ ಕಾರಣದಿಂದ ಸೋಲು ಅನುಭವಿಸಲಿದೆ. ಶಿರಾ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಡಿ.ಕೆ.ಸುರೇಶ್ ಕುಮಾರ್ ಅವರು ಪ್ರಚಾರ ನಡೆಸಿದ್ದಾರೆ. ಈ ನಡುವೆ ಎರಡು ಕ್ಷೇತ್ರಗಳಲ್ಲಿ ಕೂಡಾ ಡಿ.ಕೆ.ಶಿವಕುಮಾರ್ ಅವರು ಪ್ರಚಾರ ನಡೆಸಿದ್ದಾರೆ. ಆದರೆ, ಬಿಜೆಪಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ" ಎಂದಿದ್ದಾರೆ.
"ಆರ್.ಆರ್.ನಗರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಒಂದು ವೇಳೆ ಡಿಕೆ ಸೋದರರು ಸೋತರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರು ಸೂಕ್ತವೇ ಎನ್ನುವ ಪ್ರಶ್ನೆ ಮೂಡುತ್ತದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರ ವ್ಯಾಪ್ತಿಯ ಕ್ಷೇತ್ರದಲ್ಲಿ ಸೋತರೆ ರಾಜ್ಯವನ್ನು ಡಿ.ಕೆ.ಶಿವಕುಮಾರ್ ಹೇಗೆ ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.