ನವದೆಹಲಿ, ನ. 02 (DaijiworldNews/MB) : ಬಾಬ್ರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ನಿವೃತ್ತ ವಿಶೇಷ ನ್ಯಾಯಾಧೀಶರಿಗೆ ಭದ್ರತೆಯನ್ನು ಮುಂದುವರೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಮಾರು 28 ವರ್ಷಗಳ ಹಿಂದೆ ಸೆಪ್ಟೆಂಬರ್ನಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ತೀರ್ಪನ್ನು ಸೆಪ್ಟೆಂಬರ್ 30 ರಂದು ನೀಡಿದ್ದ ಅವರು, ಬಿಜೆಪಿಯ ಸಂಸ್ಥಾಪಕ ಸದಸ್ಯರಾದ ಎಲ್ ಕೆ ಅಡ್ವಾಣಿ, ಮರಳಿ ಮನೋಹರ್ ಜೋಶಿ ಸೇರಿದಂತೆ 32 ಆರೋಪಿಗಳನ್ನು ಖುಲಾಸೆಗೊಳಿಸಿದ್ದರು. ಬಳಿಕ ತಮಗೆ ಈವರೆಗೂ ನೀಡಲಾಗಿರುವ ಭದ್ರತೆಯನ್ನು ಮುಂದುವರೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್.ಎಫ್ ನಾರಿಮನ್, ನ್ಯಾ. ನವೀನ್ ಸಿನ್ಹಾ, ನ್ಯಾ.ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ, ''ಪತ್ರ ಪರಿಶೀಲಿಸಲಾಗಿದೆ, ಭದ್ರತೆಯನ್ನು ಮುಂದುವರಿಸಲಾಗದು'' ಎಂದು ಹೇಳಿದೆ.
16 ನೇ ಶತಮಾನದ ಮಸೀದಿಯನ್ನು ಸಾವಿರಾರು ಕರ ಸೇವಕರು ಧ್ವಂಸ ಮಾಡಿದ್ದರು. ಈ ಘಟನೆಯಿಂದಾಗಿ ದೇಶದಲ್ಲಿ ನಡೆದ ಕೋಮುಗಲಭೆಯಿಂದಾಗಿ ಸುಮಾರು 3,000 ಜನರನ್ನು ಜೀವತೆತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದ ಲಕ್ನೋ ವಿಶೇಷ ನ್ಯಾಯಾಲಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ 32 ಆರೋಪಿಗಳು ದೋಷ ಮುಕ್ತ ಎಂದು ಘೋಷಿಸಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಲಕ್ನೋ ನ್ಯಾಯಾಲಯದ ತೀರ್ಪನ್ನು ಖಂಡಿಸಿದ ಕಾಂಗ್ರೆಸ್, ''ಮಸೀದಿ ಧ್ವಂಸವ್ನನು ಸುಪ್ರಿಂ ಕೋರ್ಟ್ ಕಾನೂನುಬಾಹಿರ ಎಂದಿದೆ. ಆದರೆ ಈಗ ಲಕ್ನೋ ಕೋರ್ಟ್ ಇದನ್ನು ಆಕಸ್ಮಿಕ ಎಂದು ಹೇಳುತ್ತಿದೆ'' ಎಂದಿದ್ದರು.