ಬೆಂಗಳೂರು, ನ. 02 (DaijiworldNews/MB) : ಸಾಲ ತೆಗೆದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲು ದುಡ್ಡಿಲ್ಲ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ 90,000 ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ?'' ಎಂದು ಟಾಂಗ್ ನೀಡಿದ್ದಾರೆ.
''ಕಳೆದ ವರ್ಷ ಸರ್ಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2,24,000, ಪರಿಹಾರ ನೀಡಿರುವುದು ಮಾತ್ರ 1,24,000 ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಸರ್ಕಾರ ಪರಿಹಾರ ನೀಡುವುದು ಯಾವಾಗ?'' ಎಂದು ಕೇಳಿದ್ದಾರೆ.
''ಕಳೆದ ವರ್ಷದ ಬೆಳೆ-ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಈ ವರ್ಷ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು, ಸಚಿವರು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ಮನೆಯಲ್ಲಿ ಹಾಯಾಗಿದ್ದಾರೆ, ಸಂತ್ರಸ್ತರು ಬೀದಿಯಲ್ಲಿದ್ದಾರೆ'' ಎಂದಿದ್ದಾರೆ.
''ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಕೇಳಿದ್ದು ರೂ.35,000 ಕೋಟಿ, ಅವರು ನೀಡಿದ್ದು ರೂ.1654 ಕೋಟಿ. ಈ ಬಾರಿ ರಾಜ್ಯ ಸರ್ಕಾರ ಈ ವರೆಗೆ ಕೇಳಿದ್ದು ರೂ.4000 ಕೋಟಿ.
ಕೇಂದ್ರದಿಂದ ಸಮರ್ಪಕ ಪರಿಹಾರ ಕೇಳಲೂ ನಿಮಗೆ ಭಯನಾ?'' ಎಂದು ಪ್ರಶ್ನಿಸಿದ್ದಾರೆ.
''ಆಗಸ್ಟ್ನಿಂದ ಮೂರು ತಿಂಗಳು ಸುರಿದ ಮಳೆಯಿಂದಾಗಿ 23 ಜಿಲ್ಲೆಗಳ 130 ತಾಲ್ಲೂಕುಗಳು ಬಾಧಿತವಾಗಿವೆ. ಕಳೆದ ವರ್ಷ ಹತ್ತು ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದರೆ, ಈ ವರ್ಷ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಈ ದುಪ್ಪಟ್ಟು ನಷ್ಟದಿಂದ ರೈತರು ನೆಲಹಿಡಿದಿದ್ದಾರೆ'' ಎಂದು ಹೇಳಿದ್ದಾರೆ.