ಜೈಪುರ, ನ. 02 (DaijiworldNews/MB) : ''ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ಇಂದಿನಿಂದಲೇ ರಾಜ್ಯದಲ್ಲಿ ಕಾನೂನು ಜಾರಿಗೊಳಿಸಲಿದ್ದೇವೆ'' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅವರು, ''ಕೊರೊನಾದ ವಿರುದ್ಧ ರಕ್ಷಣೆ ಪಡೆಯಲು ಮಾಸ್ಕ್ನ್ನು ಧರಿಸಲು ಕಾನೂನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಲಿದೆ. ಯಾಕೆಂದರೆ ಕೊರೊನಾದಿಂದ ರಕ್ಷಣೆ ಪಡೆಯು ಮಾಸ್ಕ್ ಲಸಿಕೆಯಾಗಿದೆ. ಮಾಸ್ಕ್ ನಮ್ಮನ್ನು ಕೊರೊನಾದಿಂದ ರಕ್ಷಿಸುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ 'ಕೊರೊನಾ ವಿರುದ್ಧದ ಬೃಹತ್ ಆಂದೋಲನ' ದೊಂದಿಗೆ ಸರ್ಕಾರವು ಇಂದು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ಕಾನೂನನ್ನು ಜಾರಿಗೆ ತರಲಿದೆ'' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅವರು ಟ್ವೀಟ್ ಮಾಡಿ "ಸಿಡಿಮದ್ದು ಸಿಡಿಸುವುದರಿಂದ ಹೊರಬರುವ ವಿಷಕಾರಿ ಹೊಗೆಯಿಂದ ಕೊರೊನಾ ಸೋಂಕಿತ ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ಪಟಾಕಿ ಮಾರಾಟ ಮಾಡಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದರು.