ಗುವಾಹಟಿ, ನ.02 (DaijiworldNews/PY): ಜೆಇಇ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಲೋಕಪ್ರಿಯ ಗೋಪಿನಾಥ್ ಬೊರ್ಡೊಲಾಯ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸ್ಥಳೀಯ ಗ್ಲೋಬಲ್ ಎಜುಲೈಟ್ ಕೋಚಿಂಗ್ ಸಂಸ್ಥೆಯ ಮಾಲೀಕ ಭಾರ್ಗವ್ ದೆಕಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲಿಸರು ಹೇಳಿದ್ದಾರೆ.
ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿಯ ಹೆಸರಿನಲ್ಲಿ ನಕಲಿ ಅಭ್ಯರ್ಥಿ ಪರೀಕ್ಷೆ ಎದುರಿಸಿದ್ದ ಎನ್ನುವ ಆರೋಪ ಕೇಳಿಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ, ಆತನ ತಂದೆ, ಟಿಸಿಎಸ್ನ ಇಬ್ಬರು ಸಿಬ್ಬಂದಿ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಸೇರಿ ಇಲ್ಲಿಯವರೆಗೆ ಐವರನ್ನು ಬಂಧಿಸಲಾಗಿದ್ದು, ಶನಿವಾರ ಮಹಿಳೆಯೋರ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಎನ್ಟಿಎಗೆ ಪತ್ರ ಬರೆದಿರುವ ಪೊಲೀಸರು, ತನಿಖೆಗೆ ಪೂರಕವಾದ ಅಂಕಿ-ಅಂಶಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಸೆ.05 ರಂದು ಗುವಾಹಟಿ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಈ ಅಭ್ಯರ್ಥಿ ಹಾಜರಾಗದೆ ತನ್ನ ಪರವಾಗಿ ತನ್ನ ಸೋಗಿನಲ್ಲಿ ಬೇರೊಬ್ಬರನ್ನು ಕಳಿಸಿ ಪರೀಕ್ಷೆ ಬರೆಸಿ ಶೇ.99.8 ರಷ್ಟು ಅಂಕ ಗಳಿಸಿದ್ದ ಎಂದು ಮಿತ್ರದೇವ್ ಶರ್ಮಾ ಎಂಬುವರು ಅ.23 ರಂದು ದೂರು ದಾಖಲಿಸಿದ್ದರು. ಈ ಅಭ್ಯರ್ಥಿಯು ಜೆಇಇ ಮೇನ್ಸ್ನಲ್ಲಿ ಶೇ.99.8 ರಷ್ಟು ಅಂಕ ಗಳಿಸಿದ್ದಾನೆ. ಅಭ್ಯರ್ಥಿ ತನ್ನ ಸ್ನೇಹಿತನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿರುವುದು ರೆಕಾರ್ಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದರು.