ತೆಲಂಗಾಣ, ನ. 02 (DaijiworldNews/MB) : ತೆಲಂಗಾಣದ ದುಬ್ಬಕಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1 ಕೋಟಿ ರೂ.ಗಳೊಂದಿಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಓರ್ವ ಸುರಭಿ ಶ್ರೀನಿವಾಸ್ ರಾವ್ ಎಂಬಾತ ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ ಅವರ ಸೋದರಳಿಯ ಎಂದು ಮಾಧ್ಯಮ ವರದಿ ಮಾಡಿದೆ.
ಮಾಹಿತಿ ದೊರೆತ ಮೇರೆಗೆ ಉತ್ತರ ವಲಯ ಕಾರ್ಯಪಡೆ ತಂಡ ಹಾಗೂ ಬೇಗಂಪೇಟೆ ಪೊಲೀಸರು ಮತದಾರರಿಗೆ ವಿತರಿಸಲು 1 ಕೋಟಿ ರೂ. ಹಣವನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಫ್ಲೈಓವರ್ ಬಳಿ ಹಿಡಿದಿದ್ದಾರೆ.
ಬಂಧಿತ ಆರೋಪಿಗಳು ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ ಅವರ ಸೋದರಳಿಯನಾದ, ಎ ಟು ಝಡ್ ಸೊಲ್ಯೂಷನ್ಸ್ ಲಿಮಿಟೆಡ್ ಎಂಬ ತಾಂತ್ರಿಕ ಸಂಸ್ಥೆ ನಡೆಸುತ್ತಿದ್ದ ಉದ್ಯಮಿ ಸುರಭಿ ಶ್ರೀನಿವಾಸ್ ರಾವ್ (47) ಹಾಗೂ ಕಾರಿನ ಚಾಲಕ ಟಿ ರವಿ ಕುಮಾರ್ (33). ಅವರಿಂದ 500 ಮತ್ತು 2,000 ರೂ. ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್, "ಬಂಧಿತರಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್ನಿಂದಾಗಿ ದುಬ್ಬಕಾ ಬಿಜೆಪಿ ಅಭ್ಯರ್ಥಿಯ ನೇರ ನಂಟಿನ ಬಗ್ಗೆ ಮಾಹಿತಿ ಬಹಿರಂಗವಾಗಿದೆ" ಎಂದು ತಿಳಿಸಿದ್ದಾರೆ.
ದುಬ್ಬಕಾದಲ್ಲಿ ಮತದಾರರಿಗೆ ವಿತರಿಸಲೆಂದು ಈ ಹಣವನ್ನು ವಿಶಾಕಾ ಇಂಡಸ್ಟ್ರೀಸ್ ಕಚೇರಿಯಿಂದ ಸುರಭಿ ಶ್ರೀನಿವಾಸ್ ರಾವ್ ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ವಿಶಾಕಾ ಇಂಡಸ್ಟ್ರೀಸ್ ಮಾಜಿ ಸಂಸದ ಜಿ. ವಿವೇಕ್ ವೆಂಕಟ ಸ್ವಾಮಿ ಒಡೆತನದಲ್ಲಿದೆ ಎಂದು ವರದಿ ತಿಳಿಸಿದೆ.