ನವದೆಹಲಿ, ನ. 02 (DaijiworldNews/MB) : ನವೆಂಬರ್ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು ನಡೆಯಲಿದ್ದು ಈ ಮೂರು ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಕೂಡಾ ನವೆಂಬರ್ ತಿಂಗಳಲ್ಲಿ ಮೂರು ಬಾರಿ ವರ್ಚುವಲ್ ಭೇಟಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೊರೊನಾ ಕಾರಣದಿಂದಾಗಿ ಈ ಶೃಂಗ ಸಭೆಯು ವರ್ಚುವಲ್ ಆಗಿ ನಡೆಯಲಿದ್ದು ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ. ನವೆಂಬರ್ 10ರಂದು ರಷ್ಯಾದ ಜವಾಬ್ದಾರಿಯಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ, ರಷ್ಯಾ ಜವಾಬ್ದಾರಿಯಲ್ಲಿ ನವೆಂಬರ್ 17ರಿಂದ ಬ್ರಿಕ್ಸ್ ಸಭೆ ಹಾಗೆಯೇ ನವೆಂಬರ್ 21 ಮತ್ತು 22ರಂದು ಸೌದಿ ಅರೇಬಿಯಾ ಜವಾಬ್ದಾರಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ.
ಲಡಾಖ್ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪರಸ್ಪರ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.