ಬೆಂಗಳೂರು, ನ. 02 (DaijiworldNews/MB) : ''ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಗಂಡ ಸತ್ತ ಮುಂಡೆಗೆ ರಾಜಕೀಯ ಏಕೆ ಎಂದು ಪ್ರಶ್ನಿಸಿದ್ದಾರೆ'' ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆರೋಪಿಸಿದರು.
ಭಾನುವಾರ ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮನೆ ಮನೆಗೆ ತೆರಳಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಗಂಡ ಸತ್ತ ಮುಂಡೆಗೆ ರಾಜಕೀಯ ಯಾಕೆ? ಆಕೆ ಗಂಡನನ್ನೇ ತಿಂದವಳು ಎಂದಿದ್ದಾರೆ. ಅಷ್ಟೇ ಅಲ್ಲದೇ ಮತಯಾಚನೆ ಮಾಡುವ ಸಂದರ್ಭ ನನ್ನ ಬಗ್ಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ. ಇದನ್ನು ನನಗೆ ಕ್ಷೇತ್ರದ ಮತದಾರರೇ ತಿಳಿಸಿದ್ದಾರೆ'' ಎಂದು ದೂರಿದರು.
''ಮುನಿರತ್ನ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ ಅವರ ಜೀವನದಲ್ಲಿ ಇಂತಹ ಸ್ಥಿತಿ ಬರದಿರಲಿ. ನನ್ನ ಸ್ಥಿತಿ ಯಾರಿಗೂ ಬರಬಾರದು. ನಾನು ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ'' ಎಂದು ಹೇಳಿದರು.
''ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಿಶಿನ-ಕುಂಕುಮವನ್ನು ಮತವಾಗಿ ಭಿಕ್ಷೆ ನೀಡಿ. ನಾನು ನನ್ನ ಬದುಕನ್ನು ನಿಮ್ಮ ಸೇವೆಗಾಗಿ ಮೀಸಲಿಡುತ್ತೇನೆ. ನಿಂದನೆ, ಅಪಮಾನಗಳಿಂದ ಮಾನಸಿಕವಾಗಿ ನೊಂದಿರುವ ನಿಮ್ಮ ಮನೆಮಗಳನ್ನು 3ರಂದು ನೀವೆಲ್ಲರೂ ಹುಡಿ ತುಂಬಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ'' ಎಂದರು.