ಹಾವೇರಿ, ನ.01 (DaijiworldNews/PY): "ಮಧ್ಯ ಕರ್ನಾಟಕದಲ್ಲೂ ಕೂಡಾ ಹುಬ್ಬಳ್ಳಿ, ಬೆಳಗಾವಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉತ್ತರ ಕರ್ನಾಟಕದಲ್ಲಿ ಅವಶ್ಯಕವಾದ ಸಾರಿಗೆ ಸಂಪರ್ಕ ಅಭಿವೃದ್ದಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಹಾವೇರಿ ಸೇರಿದಂತೆ ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳ ಮಧ್ಯಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚರ್ಚಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಹಿನ್ನೆಲೆ ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ ಕೂಡಾ ದಿನಾಂಕ ನಿಗದಿಯಾಗಿಲ್ಲ. ಈ ವಿಚಾರವಾಗಿ ಕೂಡಲೇ ಸಿಎಂ ಬಿಎಸ್ವೈ ಹಾಗೂ ಕ.ಸಾ.ಪ ಅಧ್ಯಕ್ಷರ ಜೊತೆ ಸಭೆ ನಡೆಸಿ ಎರಡು ತಿಂಗಳ ಒಳಗಾಗಿ ದಿನಾಂಕ ನಿಗದಿಪಡಿಸುತ್ತೇವೆ" ಎಂದು ಹೇಳಿದ್ದಾರೆ.
"ಈ ಬಾರಿ ಶಿರಾ ಹಾಗೂ ಆರ್.ಆರ್ನಗರದ ಉಪಚುನಾವಣೆಯ ಎರಡು ಕ್ಷೇತ್ರಗಳಲ್ಲಿಯೂ ಕೂಡಾ ಬಿಜೆಪಿ ಜಯಭೇರಿ ಬಾರಿಸಲಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಕೂಡಾ ಬಿಎಸ್ವೈ ಅವರ ನೇತೃತ್ವದಲ್ಲಿ ಎದುರಿಸಲಿದ್ದೇವೆ" ಎಂದಿದ್ದಾರೆ.