ಭೋಪಾಲ್, ನ. 01 (DaijiworldNews/MB) : ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾರವರು ಮಧ್ಯಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆಯ ಅಂತಿಮ ಹಂತದ ಪ್ರಚಾರದ ಸಂದರ್ಭ ಬಾಯಿ ತಪ್ಪಿ ಕೈ ಗುರುತಿನ ಬಟನ್ ಒತ್ತಿ ಎಂದು ಹೇಳಿ ಕಾಂಗ್ರೆಸ್ನ ಟೀಕೆಗೆ ಗುರಿಯಾಗಿದ್ದಾರೆ.
ಗ್ವಾಲಿಯರ್ನ ದಬ್ರಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರವಾಗಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ, ''ನಿಮ್ಮ ಆಶೀರ್ವಾದವನ್ನು ಇಮರ್ತಿ ದೇವಿಯವರಿಗೆ ನೀಡಿ. ಹಾಗೆಯೇ ನೀವು ಕೈ ಎತ್ತಿ ನಮಗೆ ವಿಶ್ವಾಸ ನೀಡಿ ನೀವು ನವೆಂಬರ್ 3 ರಂದು ಕೈ ಗುರುತಿನ ಬಟನ್ ಒತ್ತುತ್ತೀರೆಂದು'' ಹೇಳಿದ್ದಾರೆ. ಅಷ್ಟೇ ಅಲ್ಲದೇ, ''ಕಾಂಗ್ರೆಸ್ ಎಂದು ಳಲು ಮುಂದಾಗಿ ಕಾಂಗ್ ಎಂದ ಅವರು ಅರ್ಧಕ್ಕೆ ತಮ್ಮ ತಪ್ಪನ್ನು ಸರಿಪಡಿಸಿಕೊಂಡು, ಕಮಲದ ಗುರುತಿಗೆ ನಿಮ್ಮ ಮತವನ್ನು ಹಾಕಿ ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್, ''ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರ ಅಲೆಯನ್ನು ನೋಡಿ. ಈಗ ಸಿಂಧಿಯಾ ಎಂಬ ದೇಶದ್ರೋಹಿಯ ಬಾಯಿಯಲ್ಲಿಯೂ ಸತ್ಯ ಬಂದಿದೆ'' ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ನವೆಂಬರ್ 3ರಂದು 28 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.