ಚಿಕ್ಕಬಳ್ಳಾಪುರ, ನ.01 (DaijiworldNews/PY): "ಹಣ ಹಾಗೂ ಹೆಂಡ ಹಂಚಿ ಗೆಲ್ಲುವ ಅಗತ್ಯ ಬಿಜೆಪಿಗೆ ಇಲ್ಲ. ಕಾಂಗ್ರೆಸ್ಗೆ ಅದನ್ನು ಬಿಟ್ಟಿಕೊಟ್ಟಿದ್ದೇವೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಮೊದಲು ಹಣ ಹಾಗೂ ಹೆಂಡದ ಸಂಸ್ಕೃತಿ ತಂದಿದ್ದು ಕಾಂಗ್ರೆಸ್. ಅವರಿಗೆ ಹೆಂಡ ಹಾಗೂ ಹಣ ಹಂಚುವ ಅಭ್ಯಾಸವಿದೆ. ಈ ಕಾರಣದಿಂದಲೇ ಕೈ ಪಕ್ಷಕ್ಕೆ ದೇಶದಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಲಾಗದ ಸ್ಥಿತಿಗೆ ತಲುಪಿದೆ" ಎಂದಿದ್ದಾರೆ.
"40-50 ವರ್ಷಗಳ ಹಿಂದೆಯೇ ಈ ಪರಂಪರೆಯನ್ನು ಹುಟ್ಟುಹಾಕಿದ ಮಹಾನ್ ಪುರುಷರು ಕಾಂಗ್ರೆಸಿಗರು. ಉಪಚುನಾವಣಾ ಫಲಿತಾಂಶದ ನಂತರ ಏನು ಹೇಳಬೇಕು ಎನ್ನುವ ಬಗ್ಗೆ ಈಗಲೇ ತಯಾರಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವುದು ಅವರಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ಫಲಿತಾಂಶದ ಬಳಿಕ ಅವರು ಏನೂ ಹೇಳುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ನಮ್ಮ ಸರ್ಕಾರ ಪತನವಾಗಲು ಕಾರಣವೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ರಾಜಕೀಯದಲ್ಲಿ ವಂಚನೆ ಮಾಡುವುದು ಕಾಂಗ್ರೆಸ್ನ ಪರಂಪರೆಯಾಗಿದೆ. ರಾಜ್ಯದಲ್ಲಿ ಮುಂಬರುವ ಐದು ವರ್ಷದಲ್ಲಿ ಕಾಂಗ್ರೆಸ್ ಇರುವುದಿಲ್ಲ, ವಿರೋಧ ಪಕ್ಷವೂ ಇರುವುದಿಲ್ಲ" ಎಂದಿದ್ದಾರೆ.