ಮೈಸೂರು, ನ.01 (DaijiworldNews/PY): "ಆರ್.ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅವರು ಅಭಿವೃದ್ದಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ಸಿದ್ದರಾಮಯ್ಯ ಅವರ ಮನೆಯಿಂದ ಹಣ ಕೊಟ್ಟಿಲ್ಲ. ಹಾಗಾಗಿ ಈ ಬಾರಿ ಆರ್.ಆರ್ ನಗರದ ಉಪಚುನಾವಣೆಯಲ್ಲಿ ಶೇ. 100ರಷ್ಟು ಮುನಿರತ್ನ ಅವರೇ ವಿಜಯಶಾಲಿಯಾಗುತ್ತಾರೆ" ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುನಿರತ್ನ ಅವರು ಬಜೆಟ್ನಲ್ಲಿ ನೀಡಿದ ಹಣವನ್ನು ಉತ್ತಮವಾಗಿ ಅವರ ಕ್ಷೇತ್ರದ ಅಭಿವೃದ್ದಿಗಾಗಿ ಬಳಸಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ದಿಗೆ ಹಣ ಕೊಟ್ಟಿಲ್ಲ. ಲಾಕ್ಡೌನ್ ವೇಳೆ ಕಾಂಗ್ರೆಸಿಗರು ಒಂದು ಲೋಟ ನೀರನ್ನೂ ಕೊಡಲಿಲ್ಲ" ಎಂದಿದ್ದಾರೆ.
"ನಮ್ಮನ್ನು ಸಿದ್ದರಾಮಯ್ಯ ಅವರು ಬೆಳೆಸಿಲ್ಲ. ಮೊದಲಿನಿಂದಲೇ ನಾವು ಕಾಂಗ್ರೆಸ್ನಲ್ಲೇ ಇದ್ದೆವು. ಸಿದ್ದರಾಮಯ್ಯ ಅವರು ಕೊನೆಗೆ ಸೇರ್ಪಡೆಯಾದವರು. ನಾವೇನೂ ಅವರ ಮೇಲೆ ಕೋಪದಿಂದ ಪಕಷ ಬಿಟ್ಟಿಲ್ಲ. ಈಗ ಉಂಟಾದ ಸಮಸ್ಯೆಗೆ ಪರಿಹಾರ ಒದ್ದಾಡುವ ಬದಲು ಪರಿಹಾರ ಹುಡುಕಿದರೆ ಉತ್ತಮ" ಎಂದು ಹೇಳಿದ್ದಾರೆ.
ಮೈಸೂರ ದಸರಾ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, "ಈ ವರ್ಷದ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಒಟ್ಟು ಸುಮಾರು 2.5 ಕೋಟಿ.ರೂ ವೆಚ್ಚವಾಗಿದೆ. ಸರ್ಕಾರದಿಂದ ಒಟ್ಟು 9.14 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು ಎಂದು ತಿಳಿಸಿದ್ದಾರೆ.
"ಹಳೆಯ ಸಂಪ್ರದಾಯದಂತೆ ಎಲ್ಲವನ್ನು ಮಾಡಿದ್ದೇವೆ. ದಸರಾ ಆಚರಣೆಗೆ ಹತ್ತು ಕೋಟಿ ಬಿಡುಗಡೆಯಾಗಿದ್ದು, ಸರ್ಕಾರದ ಬಿಡುಗಡೆ ಮಾಡಿದ ಹಣದಲ್ಲಿ ಖರ್ಚು ಮಾಡಿದ್ದೇವೆ. ಉಳಿದ ಹಣವನ್ನು ಸಿಎಂ ಅವರ ಗಮನಕ್ಕೆ ತರಲಿದ್ದು, ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಕ್ರಮ ಕೈಗೊಳ್ಳಿದ್ದೇವೆ" ಎಂದಿದ್ದಾರೆ.