ಛಪ್ರ, ನ. 01 (DaijiworldNews/MB) : ''ಮಹಾಘಟಬಂಧನ ಮೈತ್ರಿಕೂಟದಲ್ಲಿ ಇಬ್ಬರು ಯುವರಾಜರು ಇದ್ದಾರೆ. ಅವರಲ್ಲಿ ಒಬ್ಬರು ಜಂಗಲ್ ರಾಜ್ನ ಆಡಳಿತದ ಪರಂಪರೆಯನ್ನು ಹೊಂದಿರುವವರು'' ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಬಿಹಾರದಲ್ಲಿ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ಭಾನುವಾರ ಮೋದಿಯವರು ಬಿಹಾರದಲ್ಲಿ ನಾಲ್ಕು ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಛಪ್ರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿಯವರು ಮಾತನಾಡಿದ್ದಾರೆ.
''ಈಗಾಗಲೇ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ನಿತೀಶ್ ಕುಮಾರ್ ಅವರೇ ಮತ್ತೆ ಸರ್ಕಾರ ರಚನೆ ಮಾಡಲಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಅಭಿವೃದ್ದಿಗಾಗಿ ಪಣತೊಟ್ಟು ಕಾರ್ಯ ನಿರ್ವಹಿಸುತ್ತದೆ'' ಎಂದು ಹೇಳಿದ್ದಾರೆ.
''ಮಹಾಘಟಬಂಧನ ಮೈತ್ರಿಕೂಟದಲ್ಲಿ ಇಬ್ಬರು ಯುವರಾಜರಿದ್ದಾರೆ. ಅವರು ತಮ್ಮ ತಮ್ಮ ಗದ್ದುಗೆ ಉಳಿಸಿಕೊಳ್ಳಲು ತಮ್ಮ ನಡುವೆಯೇ ಕಿತ್ತಾಟ ನಡೆಸುತ್ತಿದ್ದಾರೆ. ಒಬ್ಬರು ಕುಟುಂಬ ರಾಜಕಾರಣದ ಪರಂಪರೆಯಿಂದ ಬಂದಿದ್ದರೆ, ಮತ್ತೊಬ್ಬರು ಜಂಗಲ್ ರಾಜ್ ಆಡಳಿತದ ಪರಂಪರೆಯಿಂದ ಬಂದಿದ್ದಾರೆ'' ಎಂದು ತೇಜಸ್ವಿ ಯಾದವ್ ಹಾಗೂ ರಾಹುಲ್ ಗಾಂಧಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ.