ಬೆಂಗಳೂರು, ನ. 01 (DaijiworldNews/MB) : ಭಾನುವಾರ ನಾಡಿನೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕೊರೊನಾ ಕಾರಣದಿಂದಾಗಿ ಈ ಬಾರಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಬಳಿಕ ಸಚಿವ ಎಸ್. ಸುರೇಶ್ ಕುಮಾರ್ ಅವರು ನಾಡಧ್ವಜಾರೋಹಣ ಮಾಡಿದರು.
ಬಳಿಕ ಮಾತನಾಡಿದ ಬಿಎಸ್ವೈ ಅವರು, ''ಕನ್ನಡದ ಉಳಿವಿಗಾಗಿ ಹೆಚ್ಚಾಗಿ ಕನ್ನಡ ಭಾಷೆ ಮಾತನಾಡೋಣ. ಮನೆಯಲ್ಲಿ ಮಕ್ಕಳಲ್ಲಿ ಕನ್ನಡ ಮಾತನಾಡುವುದು ಮುಖ್ಯ. ಇದರಿಂದಾಗಿ ಕನ್ನಡ ಭಾಷೆಯ ಉಳಿವು ಸಾಧ್ಯ. ತಂತ್ರಜ್ಞಾನ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸೋಣ'' ಎಂದು ಹೇಳಿದ್ದಾರೆ.
''ಪ್ರಧಾನಿಯವರು ಇಂದು ಕನ್ನಡದಲ್ಲಿಯೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಕರ್ನಾಟಕದ ಪರವಾಗಿ ಪ್ರಧಾನಿಯವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ಒಂದು ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಕಾರ್ಯಕ್ರಮ ರೂಪಿಸಲಾಗುತ್ತದೆ'' ಎಂದು ಹೇಳಿದರು.
ಹಾಗೆಯೇ ''ಕೊರೊನಾದ ಈ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ'' ಎಂದು ಹೇಳಿದ್ದಾರೆ.