ಬೆಂಗಳೂರು,ನ.01 (DaijiworldNews/HR): ರಾಜ್ಯದ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯನ್ನು ನ. 10ಕ್ಕೆ ಭಾರತೀಯ ಚುನಾವಣಾ ಆಯೋಗವು ಮುಂದೂಡಿಕೆ ಮಾಡಿದೆ. ಈ ಹಿಂದೆ ಈ ಚುನಾವಣೆಯ ಮತ ಎಣಿಕೆಯನ್ನು ನವೆಂಬರ್ 2 ರಂದು ನಡೆಸಲು ನಿರ್ಧರಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಆಗ್ನೇಯ ಪದವೀಧರ, ಕರ್ನಾಟಕ ಪಶ್ಚಿಮ ಪದವೀಧರರು, ಕರ್ನಾಟಕ ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕ ಕ್ಷೇತ್ರಗಳಿಗೆ ಅಕ್ಟೋಬರ್ 28ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆಯನ್ನು ನವೆಂಬರ್ 2 ರಿಂದ ನವೆಂಬರ್ 10 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ನ. 10 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮರು ಮತದಾನ ಮಾಡಬೇಕಾದ ಪರಿಸ್ಥಿತಿ ಎದುರಾದ್ದಲ್ಲಿ ನವೆಂಬರ್ 13ರಂದು ಮತದಾನ ನಡೆಸಲಾಗುತ್ತದೆ ಎಂದಿದ್ದಾರೆ.
ಶನಿವಾರ ಕಾಂಗ್ರೆಸ್ ನಾಯಕರು, ಶಿರಾ ಹಾಗೂ ಆರ್ಆರ್ ನಗರ ಕ್ಷೇತ್ರದ ಉಪ ಚುನಾವಣೆ ನಿಟ್ಟಿನಲ್ಲಿ ಪದವೀಧರ ಕ್ಷೇತ್ರಗಳ ಮತ ಎಣಿಕೆ ನಿಗದಿತ ದಿನವನ್ನು ಮುಂದೂಡಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.