ನವದೆಹಲಿ, ನ. 01 (DaijiworldNews/MB) : ಭಾನುವಾರ ನಾಡಿನೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆಗೆ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿಯವರು ಕನ್ನಡದಲ್ಲಿಯೇ ಟ್ವೀಟಿಸಿದ್ದಾರೆ.
''ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.
''ಸಮಸ್ತ ಕನ್ನಡಿಗರಿಗೆ 65ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಪರಂಪರೆಗಳು ಸದಾ ಬೆಳಗಲಿ, ತಾಯಿ ಭುವನೇಶ್ವರಿಯ ಅನುಗ್ರಹದಿಂದ ಸ್ವಚ್ಛ, ಅರೋಗ್ಯಪೂರ್ಣ ಹಾಗೂ ಸಮೃದ್ಧ ಕನ್ನಡ ನಾಡು ನಿರ್ಮಾಣವಾಗಲಿ'' ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸುವ ಪುಣ್ಯದ ಕೆಲಸಕ್ಕೆ ನಮ್ಮನ್ನು ಮತ್ತೆ ಮತ್ತೆ ಸಮರ್ಪಿಸಿಕೊಳ್ಳುವ ದಿನ. ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಹೇಳಿದ್ದಾರೆ.
ಹಾಗೆಯೇ ''ಕನ್ನಡ ರಾಜ್ಯೋತ್ಸವ ಎಂದರೆ.. ನಮ್ಮ ಜನ,ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸಲು ದುಡಿದ-ಮಡಿದ ಹಿರಿಯ ಮಹಾಪುರುಷರಿಗೆ ತಲೆಬಾಗುವ ದಿನ. ಆ ಪುಣ್ಯಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ. ಕನ್ನಡ ಮೊದಲು, ನಾನು ಮೊದಲು ಕನ್ನಡಿಗ'' ಎಂದಿದ್ದಾರೆ.
''ನಾಡಿನ ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಮೃದ್ಧ ರಾಜ್ಯಗಳಿಂದಲೇ ಸಮೃದ್ಧ ದೇಶ ಕಟ್ಟಲು ಸಾಧ್ಯ. ಕನ್ನಡತನ, ಕನ್ನಡಮನದೊಂದಿಗೆ ಎಲ್ಲರೂ ನಾಡು ಕಟ್ಟಲು ಪಣ ತೊಡೋಣ'' ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಟ್ವೀಟಿಸಿದ್ದಾರೆ.