ನವದೆಹಲಿ, ಅ. 31 (DaijiworldNews/MB) : ಕಳೆದ ವರ್ಷ ನಡೆದ ಪುಲ್ವಾಮಾ ದಾಳಿಗೆ ಸಂಬಂಧಿಸಿ ಪ್ರತಿ ಪಕ್ಷ ಕಾಂಗ್ರೆಸ್ ಸರ್ಕಾರದ ಮುಂದೆ ಇರಿಸಿದ ಪ್ರಶ್ನಗಳಿಗೆ ಕ್ಷಮೆ ಕೋರಬೇಕೆಂಬ ಬಿಜೆಪಿಯ ಆಗ್ರಹವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರು, ''ಅರ್ಥವಾಗುತ್ತಿಲ್ಲ, ನಾವೇಕೆ ಕ್ಷಮೆಯಾಚಿಸಬೇಕು'' ಎಂದು ಕೇಳಿದ್ದಾರೆ.
ಶುಕ್ರವಾರ ಈ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಅವರು, ''ಪುಲ್ವಾಮಾ ದಾಳಿಗೆ ಪಾಕಿಸ್ತಾನ ಕಾರಣವೆಂದು ಒಪ್ಪಿಕೊಂಡಿದೆ. ಈ ಪಿತೂರಿಯ ವಿಚಾರವಾಗಿ ಕಾಂಗ್ರೆಸ್ ಮಾತನಾಡಿದ್ದ ವಿಚಾರಕ್ಕೆ ಸಂಬಂಧಿಸಿ ದೇಶದ ಮುಂದೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು'' ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಶಶಿ ತರೂರು, ''ಕಾಂಗ್ರೆಸ್ ಯಾಕೆ ಕ್ಷಮೆಯಾಚಿಸಬೇಕು ಎಂದು ಕಂಡುಹಿಡಿಯುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಅಷ್ಟಕ್ಕೂ ನಾವು ಕ್ಷಮೆಯಾಚಿಸಬೇಕಾಗಿರುವುದು ಸರ್ಕಾರ ನಮ್ಮ ಸೈನಿಕರನ್ನು ಸುರಕ್ಷಿತವಾಗಿರಿಸಬೇಕೆಂದು ನಿರೀಕ್ಷಿಸಿದ್ದಕ್ಕಾಗಿಯೇ? ರಾಷ್ಟ್ರೀಯ ದುರಂತವನ್ನು ರಾಜಕೀಯಗೊಳಿಸುವುದರ ಬದಲು ರಾಷ್ಟ್ರ ಧ್ವಜ ಹಿಡಿದು ಗೌರವ ಸಲ್ಲಿಸಿ ರ್ಯಾಲಿ ಮಾಡಿದ್ದಕ್ಕಾಗಿಯೇ? ನಮ್ಮ ಹುತಾತ್ಮರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಕ್ಕಾಗಿಯೇ?'' ಎಂದು ಪ್ರಶ್ನಿಸಿದ್ದಾರೆ.