ಅಲಹಾಬಾದ್, ಅ.31 (DaijiworldNews/PY): ''ಕೇವಲ ವಿವಾಹವಾಗುವ ಉದ್ದೇಶದಿಂದ ಆದ ಮತಾಂತರ ಮಾನ್ಯವಲ್ಲ'' ಎಂದು ಅಲಹಾಬಾದ್ ಹೈಕೋರ್ಟ್ ಪ್ರಕರಣವೊಂದರಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಹೊಸದಾಗಿ ವಿವಾಹವಾದ ದಂಪತಿ ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ನೀಡದಂತೆ ಪೊಲೀಸರಿಗೆ ಹಾಗೂ ಮಹಿಳೆಯ ತಂದೆಗೆ ನಿರ್ದೇಶನ ನೀಡುವ ಸಲುವಾಗಿ ಕೋರಿ ನ್ಯಾಯಾಲಯಕ್ಕೆ ದಂಪತಿ ಅರ್ಜಿ ಸಲ್ಲಿಸಿದ್ದರು. ಪ್ರಿಯಾನ್ಶಿ ಅಲಿಯಾಸ್ ಸಮ್ರೀನ್ ಹಾಗೂ ಆಕೆಯ ಪತಿ ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದು, ತಮ್ಮ ವೈವಾಹಿಕ ಜೀವನಕ್ಕೆ ಮಹಿಳೆಯ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿಯ ವಿಚಾರವಾಗಿ ನ್ಯಾ.ಎಂ.ಸಿ. ತ್ರಿಪಾಠಿ ಈ ಆದೇಶವನ್ನು ನೀಡಿದ್ದಾರೆ.
ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿದ್ದು, ಜೂನ್ 29,2020ರಂದು ವಿವಾಹಕ್ಕೂ ಒಂದು ತಿಂಗಳ ಮುನ್ನ ಅರ್ಜಿದಾರರು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಜುಲೈ 31,2020ರಂದು ಅವರು ತಮ್ಮ ವಿವಾಹವನ್ನು ದೃಢೀಕರಿಸಿರುವುದು ನ್ಯಾಯಾಲಯಕ್ಕೆ ತಿಳಿದಿದೆ. ವಿವಾಹದ ಉದ್ದೇಶಕ್ಕಾಗಿ ಮಾತ್ರ ಈ ಮತಾತಂತರವಾಗಿದೆ ಎಂದು ಹೇಳಿದೆ.
ಈ ಪ್ರಕರಣದಲ್ಲಿ ಹಿಂದೂ ಬಾಲಕಿ ಇಸ್ಲಾಂಗೆ ಮತಾಂತರಗೊಂಡ ಬಳಿಕ ವಿವಾಹವಾದ ಕಾರಣ ವಿವಾಹಿತ ದಂಪತಿಗಳು ತಮಗೆ ರಕ್ಷಣೆ ನೀಡುವಂತೆ ನೂರ್ ಜಹಾನ್ ಬೇಗಂ ನ್ಯಾಯಾಲಯವನ್ನು ಕೋರಿದ್ದು, ಅಲಹಾಬಾದ್ ಹೈಕೋರ್ಟ್ ಈ ಪ್ರಕರಣದ ಅರ್ಜಿನ್ನು ತಿರಸ್ಕರಿಸಿತ್ತು.
ಕೇವಲ ವಿವಾಹದ ಉದ್ದೇಶದ ಸಲುವಾಗಿ ಮತಾಂತರಗೊಳ್ಳುವುದು ಸ್ವೀಕಾರರ್ಹವಲ್ಲ ಎಂದು 2014ರಲ್ಲಿ ಹೈಕೋರ್ಟ್ ತಿಳಿಸಿರುವ ನೂರ್ ಜಹಾನ್ ಬೇಗಂ ಅವರ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸಿದೆ.