ನವದೆಹಲಿ, ಅ. 31 (DaijiworldNews/MB) : ಕೊರೊನಾ ಲಸಿಕೆ ಲಭ್ಯವಾಗುವ ಮೊದಲೇ ಈಗಾಗಲೇ ಬಿಹಾರದ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ. ಇದರ ಬೆನ್ನಿಗೆ ಹಲವು ರಾಜ್ಯಗಳಲ್ಲಿ ಉಚಿತ ಕೊರೊನಾ ಲಸಿಕೆ ಭರವಸೆ ನೀಡಲಾಗಿದೆ. ಈ ಭರವಸೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರೊಂದು ಸಲ್ಲಿಕೆಯಾಗಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯೋಗವು, ''ಉಚಿತ ಕೊರೊನಾ ಲಸಿಕೆ ವಿತರಣೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಾಗಲ್ಲ'' ಎಂದು ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿಯು ನೀಡಿರುವ ಭರವಸೆಯನ್ನು ಪ್ರಶ್ನಿಸಿ ಆಯೋಗಕ್ಕೆ ದೂರು ನೀಡಿದ್ದು, ಇದರಲ್ಲಿ ''ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಕಾರವನ್ನು ಬಿಜೆಪಿಯು ದುರುಪಯೋಗಮಾಡಿದೆ. ಕೇಂದ್ರ ಸರ್ಕಾರ ಕೆಲವು ರಾಜ್ಯಗಳನ್ನು ಗುರಿ ಮಾಡಿಕೊಂಡು ಭರವಸೆ ನೀಡಿದೆ ಎಂಬುದನ್ನು ಆಯೋಗ ಮರೆತಿದೆ'' ಎಂದು ದೂರಿದ್ದಾರೆ.
ಈ ದೂರಿಗೆ ಪ್ರತಿಕ್ರಿಯೆ ನೀಡಿರುವ ಆಯೋಗವು, ''ಮತದಾರರನ್ನು ಓಲೈಸಲು ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡುವುದು ಸಾಮಾನ್ಯ. ಬಿಜೆಪಿಯ ಈ ಪ್ರಣಾಳಿಕೆಯಿಂದಾಗಿ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ'' ಎಂದು ಸ್ಪಷ್ಟಪಡಿಸಿದೆ.
ಬಿಹಾರ ಚುನಾವಣೆಯ ನಿಟ್ಟಿನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿ, ಜನರಿಗೆ ಉಚಿತ ಕೊರೊನಾ ಲಸಿಕೆಯ ಭರವಸೆ ನೀಡಿದ್ದರು. ಈ ಭರವಸೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು ಕೆಲವರು ಬಿಜೆಪಿಯನ್ನು ಲೇವಡಿ ಮಾಡಿದ್ದರು. ಲಸಿಕೆ ಲಭ್ಯವಾಗುವ ಮೊದಲೇ ಬಿಜೆಪಿ ಭರವಸೆ ನೀಡಿದೆ ಎಂದು ವ್ಯಂಗ್ಯವಾಡಿದ್ದರು. ವಿಪಕ್ಷಗಳು ಬಿಜೆಪಿ ಆಡಳಿತ ದುರುಪಯೋಗ ಮಾಡುತ್ತಿದೆ ಎಂದು ದೂರಿದ್ದರು. ಹಾಗೆಯೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.