ಬೆಂಗಳೂರು, ಅ.31 (DaijiworldNews/PY): "ಸಮ್ಮಿಶ್ರ ಸರ್ಕಾರದ ಸಂದರ್ಭ ನಿಮ್ಮ ಬಳಿ ಪತ್ರ ತಂದಾಗ ನೀವು ಎಷ್ಟು ಗೌರವ ನೀಡಿದ್ದೀರಿ ಎನ್ನುವ ವಿಚಾರವನ್ನು ಮನನ ಮಾಡಿಕೊಳ್ಳಿ" ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರೋಧ ಪಕ್ಷದವರ ಟೀಕೆಗೆ ತಿರುಗೇಟು ನೀಡಿದ್ದಾರೆ.
ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, "ಕ್ಷೇತ್ರದ ಉಪಚುನಾವಣೆಯ ಸಂದರ್ಭ ವಿಪಕ್ಷಗಳು ಟೀಕೆ ಮಾಡುತ್ತಿವೆ. ಹಾಗಾದರೆ ನೀವು ಸಮ್ಮಿಶ್ರ ಸರ್ಕಾರದ ಸಂದರ್ಭ ನಿಮ್ಮ ಬಳಿ ಪತ್ರ ತಂದಾಗ ಎಷ್ಟು ಗೌರವ ನೀಡಿದ್ದೀರಿ? ನೀವು ಸರಿ ಇರುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ" ಎಂದಿದ್ದಾರೆ.
"ನಿಮಗೆ 80 ಮಂದಿ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗಲಿಲ್ಲ. ಆದರೆ, ತಾಯಿ ಮೋಸ ಮಾಡಿದ್ದಾರೆ ಎಂದು ಹೇಳುತ್ತೀರಿ. ಹಾಗಾದರೆ, ಜಮೀರ್, ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರನ್ನು ಎಲ್ಲಿಂದ ಕರೆತಂದಿದ್ದೀರಾ?'' ಎಂದು ಪ್ರಶ್ನಿಸಿದ್ದು ''ಓರ್ವ ಶಾಸಕನಿಗೆ ರಕ್ಷಣೆ ನೀಡಲು ನಿಮ್ಮಿಂದ ಆಗಿಲ್ಲ" ಎಂದು ಲೇವಡಿ ಮಾಡಿದ್ದಾರೆ.
"ನಮ್ಮ ಸರ್ಕಾರದ ಅವಧಿ ಇನ್ನೂ ಕೂಡಾ ಎರಡು ವರ್ಷ ಇದೆ. ಸಿಎಂ ಬಿಎಸ್ವೈ ಅವರು ಕೊಟ್ಟ ಮಾತಿಗೆ ತಪ್ಪಿಲ್ಲ ಎನ್ನುವ ಮಾತು ಕೇಳಿದ್ದೇನೆ. ಈಗ ಈ ಮಾತನ್ನು ನಿಜ ಜೀವನದಲ್ಲಿ ಕೇಳಿದ್ದೇನೆ. ಆರ್.ಆರ್ ಕ್ಷೇತ್ರ ಹಾಗೂ ಬೆಂಗಳೂರು ಅಭಿವೃದ್ದಿ ಆಗಬೇಕು. ಇದರ ಅಭಿವೃದ್ದಿ ಬಿಎಸ್ವೈ ಸರ್ಕಾರ ಮಾಡುತ್ತದೆ. ನ್ಯಾಯಯುತವಾಗಿ ಮತದಾನ ಮಾಡಿ, ಅಭಿವೃದ್ದಿ ಪರ ಸಹಕರಿಸಿ, ನನಗೆ ಮತ ನೀಡಿ" ಎಂದು ಕೋರಿದ್ದಾರೆ.