ಬೆಂಗಳೂರು, ಅ. 31 (DaijiworldNews/HR): ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ನಟಿಸುವುದನ್ನು ನಿಷೇಧಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದ್ದು, ಈ ಕುರಿತು ಅ.27 ರಂದು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ನಿಯಮಗಳು 2020ರ ಕರಡು ಪ್ರತಿಯನ್ನು ಪ್ರಕಟಿಸಿದೆ.
ಸರ್ಕಾರ ಪ್ರಕಟಿಸಿದ ಈ ಕರಡು ಪ್ರತಿಯಲ್ಲಿ ಸರ್ಕಾರಿ ನೌಕರರು ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಉಲ್ಲೇಖಿಸಿ ನಿಯಮಾವಳಿಗಳನ್ನು ಪ್ರಕಟ ಮಾಡಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವಂತೆ 15 ದಿನಗಳ ಕಾಲಾವಕಾಶ ನೀಡಿ ಮನವಿ ಮಾಡಿದೆ.
ಸರ್ಕಾರಿ ನೌಕರರು ಪತ್ರಿಕೆ, ರೇಡಿಯೋ, ದೂರದರ್ಶನ ಅಥವಾ ಯಾವುದೇ ರೀತಿಯ ಪ್ರದರ್ಶನ ಕಲೆಗಳು, ಸಮೂಹ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು ಅಥವಾ ಪುಸ್ತಕಗಳನ್ನು ಬರೆಯುವುದು, ಲೇಖನಗಳು ಪ್ರಕಟಿಸುವುದು ಸೇರಿದಂತೆ ಹಲವು ನಿಯಮಗಳನ್ನು ಹೊರಡಿಸಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ನಿಯಮಾವಳಿಗಳನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ.
ಇನ್ನು ಸರ್ಕಾರಿ ನೌಕರರು ಅನುಮತಿ ಪಡೆದುಕೊಳ್ಳದೇ ಯಾವುದೇ ಪತ್ರಿಕೆ ಅಥವಾ ನಿಯತಕಾಲಿಕದಲ್ಲಿ ಬರೆಯುವುದು, ಲೇಖನ ಪ್ರಕಟಿಸುವುದು, ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂಬುದು ಕರಡು ನಿಯಮದಲ್ಲಿದೆ.