ಬೆಂಗಳೂರು, ಅ. 31 (DaijiworldNews/MB) : ''ಎಲ್ಲಿ ಬೇಕಾದ್ರೂ ಬಿಜೆಪಿ ಗೆಲ್ಲುತ್ತೆ ಎಂಬುದನ್ನು ಶಿರಾ ಕ್ಷೇತ್ರದ ಉಪ ಚುನಾವಣೆ ಸಾಬೀತುಪಡಿಸಲಿದೆ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು, ''ಶಿರಾ ಹಾಗೂ ಆರ್ಆರ್ ನಗರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಯಾವುದೇ ಸ್ಪರ್ಧೆಯಿಲ್ಲ. ನಾವು ಪ್ರಚಾರಕ್ಕೆ ಹೋದ ಎಲ್ಲಾ ಕಡೆ ಬಿಜೆಪಿ ಪರವಾದ ಧ್ವನಿಯೇ ಕೇಳುತ್ತಿದೆ. ನಾವು ಬಹು ಮತದ ಅಂತರದಲ್ಲಿ ಗೆಲವು ಸಾಧಿಸುವುದು ಖಂಡಿತ. ಈವರೆಗೂ ಗೆಲುವು ಕಾಣದ ಶಿರಾದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಎಲ್ಲಿ ನಿಂತರೂ ಗೆಲುವು ಬಿಜೆಪಿಗೆ ಕಟ್ಟಿಟ್ಟ ಬುತ್ತಿ ಎಂಬುದು ಸಾಬೀತಾಗಲಿದೆ'' ಎಂದು ಹೇಳಿದ್ದಾರೆ.
ಒಕ್ಕಲಿಗರ ಪ್ರಾಬಲ್ಯವಿರುವ ಶಿರಾ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಗೆಲುವು ಸಾಧಿಸಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶಿರಾ ಕ್ಷೇತ್ರದಲ್ಲಿ ಕಣಕ್ಕೂ ಇಳಿದಿರಲಿಲ್ಲ. ಜೆಡಿಎಸ್ನ ಬಿ ಸತ್ಯನಾರಾಯಣ ಕಾಂಗ್ರೆಸ್ನ ಟಿ ಬಿ ಜಯಚಂದ್ರ ವಿರುದ್ದ 10 ಸಾವಿರ ಮತಗಳ ಅಂತರದಿಂದ ಗೆಲವು ತಮ್ಮದಾಗಿಸಿಕೊಂಡಿದ್ದರು.