ಬೆಂಗಳೂರು, ಅ.31 (DaijiworldNews/PY): ಮಾಜಿ ಡಿಸಿಎಂ, ಶಾಸಕ ಜಿ.ಪರಮೇಶ್ವರ ಅವರ ಸಹೋದರನ ಮಗಳ ಹೆಸರು ಹೇಳಿಕೊಂಡು ಜನರಿಗೆ ವಂಚನೆ ಮಾಡಿದ ಆರೋಪದಡಿ ಮಹಿಳೆಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಮಹಿಳೆಯನ್ನು ಜ್ಞಾನ ಗಂಗಾ ಲೇಔಟ್ನ ನಿವಾಸಿ ಪಲ್ಲವಿ (32) ಎನ್ನಲಾಗಿದೆ.
ನಾನೊಬ್ಬಳು ಸಮಾಜಸೇವಕಿ, ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ನಿಂದ ಸಾಲ ಕೊಡಿಸುತ್ತೇನೆ ಎಂದು ಹೇಳಿ ವಂಚಿಸಿದ್ದು, ಹತ್ತಕ್ಕೂ ಅಧಿಕ ಮಂದಿಗೆ ಈಕೆ ವಂಚಿಸಿದ್ದಾಳೆ. ಈಕೆಯನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈಕೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಕೊಡುವುದಾಗಿ ಹೇಳಿ ವಂಚಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬ್ ಚಾಲಕರಾಗಿದ್ದ ನಾಗದೇವನಹಳ್ಳಿಯ ಯೋಗೇಶ್ ಎಂಬವರಿಗೆ ಪಲ್ಲವಿಯ ಪರಿಚಯವಾಗಿತ್ತು. ನಾನು ಮಾಜಿ ಡಿಸಿಎಂ ಜಿ.ಪರಮೇಶ್ವರ ಅವರ ಸಹೋದರನ ಮಗಳು. ನಾನು ಸಮಾಜಸೇವಕಿ ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕ್ನಿಂದ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದು, ಈ ವಿಚಾರವನ್ನು ಯೋಗೇಶ್ ನಂಬಿದ್ದರು.
ಪಲ್ಲವ ಯೋಗೇಶ್ ಅವರ ಕಾರಿನಲ್ಲಿ ಹಲವಾರು ಕಡೆ ಓಡಾಡಿದ್ದು, ಸುಮಾರು 4.30 ಲಕ್ಷ. ರೂ. ಬಾಡಿಗೆ ಆಗಿತ್ತು. ಈ ಸಂದರ್ಭ ಯೋಗೇಶ್ ಬಾಡಿಗೆ ಕೇಳಿದ್ದ ವೇಳೆ ಆಕೆ ಏನೋ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಅಲ್ಲದೇ, ಆಕೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಈ ಬಗ್ಗೆ ಯೋಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ, ಈಕೆ ಹಲವಾರು ಮಂದಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಎಂದು ಹೇಳಿದ್ದಾರೆ.