ಕೆವಾಡಿಯಾ, ಅ. 31 (DaijiworldNews/MB) : ''ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಯೋಧರ ಬಲಿದಾನದಿಂದಾಗಿ ಕೆಲವರಿಗೆ ಯಾವುದೇ ದುಃಖವಾಗಿಲ್ಲ ಎಂಬುದನ್ನು ದೇಶ ಮರೆಯಲ್ಲ'' ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಅವರು ಶನಿವಾರ ಬೆಳಗ್ಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜಯಂತಿ ಅಂಗವಾಗಿ ಗುಜರಾತ್ನ ಕೆವಾಡಿಯಾದ ನರ್ಮದಾ ನದಿ ತೀರದಲ್ಲಿ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಿಸಿ ಮಾತನಾಡಿದರು. ಇದಕ್ಕೂ ಮೊದಲು ಪಟೇಲ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
''ಪುಲ್ವಾಮಾ ದಾಳಿ ಸಂದರ್ಭದಲ್ಲಿ ಕೊಂಚವು ದುಃಖ ಪಡದ ಕೆಲವರನ್ನು ಈ ದೇಶ ಮರೆಯಲ್ಲ. ಅಂತಹ ಬೇಸರದ ಸಂದರ್ಭದಲ್ಲೂ ಅವರು ರಾಜಕೀಯ ಮಾಡಿದ್ದಾರೆ. ಎಂದಿಗೂ ಕೂಡಾ ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ'' ಎಂದು ಹೇಳಿದ್ದಾರೆ.
''ದೇಶದ ಅತ್ಯಂತ ದೊಡ್ಡ ಪಿಡುಗಾದ ಭಯೋತ್ಪಾದನೆಯ ವಿರುದ್ದ ವಿಶ್ವದ ಎಲ್ಲಾ ದೇಶಗಳು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ಹಿಂಸಾಚಾರದಿಂದಾಗಿ ಯಾರಿಗೂ ಲಾಭವಿಲ್ಲ. ಭಾರತ ಎಂದಿಗೂ ಈ ಭಯೋತ್ಪಾದನೆ ಕೃತ್ಯಗಳಿಗೆ ವಿರೋಧವಾಗಿದೆ'' ಎಂದು ತಿಳಿಸಿದ್ದಾರೆ.