ನವದೆಹಲಿ, ಅ. 31 (DaijiworldNews/MB) : ಶನಿವಾರ ಅಕ್ಟೋಬರ್ 31 ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 36ನೇ ಪುಣ್ಯತಿಥಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದ್ದಾರೆ.
1984ರಲ್ಲಿಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಅಂಗರಕ್ಷಕರೇ ಅವರನ್ನು ಹತ್ಯೆಗೈದಿದ್ದರು.
ಇಂದಿರಾ ಗಾಂಧಿಯವರಿಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ನಮ್ಮ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನಗಳು ಎಂದು ಹೇಳಿದ್ದಾರೆ. ಕಳೆದ ಭಾನುವಾರ ನಡೆದ ಮಾಸಿಕ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, ಸುಳ್ಳಿನಿಂದ ಸತ್ಯಕ್ಕೆ, ಕತ್ತಲೆಯಿಂದ ಬೆಳಕಿಗೆ, ಸಾವಿನಿಂದ ಜೀವನಕ್ಕೆ ಜೀವಿಸುವುದರ ಅರ್ಥವನ್ನು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಜ್ಜಿ ಎಂದು ಇಂಧಿರಾ ಗಾಂಧಿಯವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.
ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ಕಾಂಗ್ರೆಸ್ ನಾಯಕಿಯಾದ ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವರು ಗೌರವ ಸಲ್ಲಿಸಿದ್ದಾರೆ.