ಬೆಂಗಳೂರು, ಅ. 31 (DaijiworldNews/MB) : ಮಾಜಿ ಮೇಯರ್ ಹಾಗೂ ಬೆಂಗಳೂರು ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಆರ್. ಸಂಪತ್ ರಾಜ್ ತಪ್ಪಿಸಿಕೊಂಡಿದ್ದು ಹೇಗೆ ಎಂದು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎರಡನೇ ಬಾರಿಗೆ ನೋಟಿಸ್ ನೀಡಿದ್ದಾರೆ. ಸಂಪತ್ ರಾಜ್ ಅಕ್ಟೋಬರ್ 7 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 7 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡ ಸಂಪತ್ ರಾಜ್ನ ಪತ್ತೆ ಕಾರ್ಯಚರಣೆಯನ್ನು ಸಿಸಿಬಿ ಪೊಲೀಸರು 23 ದಿನಗಳ ಬಳಿಕ ಆರಂಭಿಸಿದ್ದಾರೆ.
ಇನ್ನು ಸಂಪತ್ ಪರಾರಿಯಾದ ವಿಚಾರಕ್ಕೆ ಸಂಬಂಧಿಸಿ ಆಸ್ಪತ್ರೆ ಮತ್ತು ಸಿಸಿಬಿ ಪೊಲೀಸರು ಪರಸ್ಪರರನ್ನು ದೂಷಿಸುತ್ತಿದ್ದಾರೆ.
ಆಸ್ಪತ್ರೆಯ ಹಿರಿಯ ಸಿಬ್ಬಂದಿಯೊಬ್ಬರ ಪ್ರಕಾರ, ಪೊಲೀಸರ ನಿರ್ಲಕ್ಷ್ಯದಿಂದಾಗಿ ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಅವರನ್ನು ಬಿಡುಗಡೆ ಮಾಡಲಾಗಿದ್ದು, ಆ ಬಳಿಕ ಅವರು ಪರಾರಿಯಾಗಿದ್ದಾರೆ.
"ಸಂಪತ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರವೂ ಯಾವುದೇ ಪೊಲೀಸರನ್ನು ಆಸ್ಪತ್ರೆಯ ಹೊರಗೆ ಇರಿಸಿಲ್ಲ. ಸಿಸಿಬಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ. ಅವರ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಹೇಗೆ ಹೊಣೆಯಾಗುತ್ತದೆ?" ಎಂದು ಹಿರಿಯ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ತಡರಾತ್ರಿ ಸಂಪತ್ಗೆ ಬಿಡುಗಡೆ ಪತ್ರ ನೀಡಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಈ ಕಾರಣದಿಂದಾಗಿ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸರು ಆಸ್ಪತ್ರೆಯ ವಿರುದ್ದ ಆರೋಪ ಮಾಡಿದ್ದಾರೆ.
ಆಗಸ್ಟ್ 11 ರಂದು ನಗರದಲ್ಲಿ ಸಂಭವಿಸಿದ ಗಲಭೆಗಳ ಕುರಿತು ಬೆಂಗಳೂರು ಸಿಸಿಬಿ ತನ್ನ ಪ್ರಾಥಮಿಕ ಚಾರ್ಜ್ಶೀಟ್ನಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಝಾಕೀರ್ ಹುಸೇನ್ ಹೆಸರನ್ನು ಉಲ್ಲೇಖಿಸಿದೆ. ಸೆಪ್ಟೆಂಬರ್ 14 ರಂದು ಸಂಪತ್ ಅವರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಹೆಬ್ಬಾಳಿನ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಂಪತ್ನ ಬಿಡುಗಡೆಗಾಗಿ ಪೊಲೀಸರು ಕಾಯುತ್ತಿದ್ದರು.
ಸಂಪತ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡುವಂತೆ ಆಸ್ಪತ್ರೆಗೆ ಸಿಸಿಬಿ ಪೊಲೀಸರು ತಿಳಿಸಿದ್ದು ಆದರೆ ಆಸ್ಪತ್ರೆ ಸಂಪತ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿಲ್ಲ.
"ಬಿಡುಗಡೆಯ ಸಮಯದ ಬಗ್ಗೆ ತಿಳಿಸುವಂತೆ ಎಸಿಪಿ ವೇಣುಗೋಪಾಲ್ ಅವರು ಅಕ್ಟೋಬರ್ 7 ರಂದು ಆಸ್ಪತ್ರೆಗೆ ಲಿಖಿತ ನೋಟೀಸ್ ನೀಡಿದ್ದರು. ಆದರೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆ ಸಿಬ್ಬಂದಿಗಳು ಸಂಪತ್ರನ್ನು ಬಿಡುಗಡೆ ಮಾಡಿದೆ" ಎಂದು ಬೆಂಗಳೂರು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಹಾಗೆಯೇ ಈ ಬಗ್ಗೆ ವಿವರಿಸಲು ಆಸ್ಪತ್ರೆಗೆ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.