ಕಾಸರಗೋಡು, ಆ. 30, (DaijiworldNews/SM): ಬೇವಿಂಜೆಯ ಗುತ್ತಿಗೆದಾರ ಎಂ. ಟಿ. ಮುಹಮ್ಮದ್ ಕುಂಞಿರವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಲು ಕ್ರೈಂ ಬ್ರ್ಯಾಂಚ್ ಪೊಲೀಸರು ತೀರ್ಮಾನಿಸಿದ್ದಾರೆ.
ಶೀಘ್ರ ಬೆಂಗಳೂರು ಜೈಲಿಗೆ ತೆರಳಿ ರವಿಪೂಜಾರಿಯನ್ನು ಬಂಧಿಸುವ ಪ್ರಕ್ರಿಯೆಗೆ ಮುಂದಾಗಲಿದ್ದು, ನ್ಯಾಯಾಲಯದ ಅನುಮತಿ ಪಡೆದು ಬಂಧಿಸಲಾಗುವುದು ಎಂದು ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿವೆ.
ಇನ್ನು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 2015 ರಲ್ಲಿ ಮನೀಶ್ ಶೆಟ್ಟಿಯನ್ನು ಬಂಧಿಸಿ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಬೇವಿಂಜೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿ ಪೂಜಾರಿಯನ್ನು ಆರೋಪಿಯನ್ನಾಗಿ ಗುರುತಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.
ಎರಡು ಬಾರಿ ಬೇವಿಂಜೆಯ ಮುಹಮ್ಮದ್ ಕುಂಞಿರವರ ಮನೆಗೆ ದಾಳಿ ನಡೆದಿತ್ತು. ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಕೊಲೆಗೀಡಾದ ರವಿ ಪೂಜಾರಿಯ ಸಹಚರ ಮನೀಶ್ ಶೆಟ್ಟಿ ಬೇವಿಂಜೆ ಪ್ರಕರಣದ ಆರೋಪಿಯಾಗಿದ್ದು, ಇದೀಗ ಕೊಲೆಯಾಗಿರುವುದರಿಂದ ಪ್ರಕರಣದಿಂದ ಮುಕ್ತಗೊಳಿಸಲಿದೆ.
2008 ಮತ್ತು 2013ರಲ್ಲಿ ಮಹಮ್ಮದ್ ಕುಂಞಿರವರ ಮನೆಗೆ ಗುಂಡು ಹಾರಿಸಲಾಗಿತ್ತು. ರವಿ ಪೂಜಾರಿ ಮುಂದಿಟ್ಟ ಭಾರೀ ಮೊತ್ತದ ಹಣ ನೀಡದಿರುವುದರಿಂದ ತಂಡವು ಬೈಕ್ ಗಳಲ್ಲಿ ಬಂದು ಮನೆಗೆ ಗುಂಡು ಹಾರಿಸಿತ್ತು. ಮಹಮ್ಮದ್ ಕುಂಞಿಯವರ ಮೊಬೈಲ್ ಗೆ ಬಂದ ಬೆದರಿಕೆ ಕರೆಯನ್ನು ಪರಿಶೀಲಿಸಿದಾಗ ಆಫ್ರಿಕಾದ ಸೆನಗಲ್ ನಿಂದ ಕರೆ ಬಂದಿರುವುದು ಬೆಳಕಿಗೆ ಬಂದಿತ್ತು. ತನಿಖೆ ನಡೆಸಿದಾಗ ಭೂಗತ ಪಾತಕಿ ರವಿ ಪೂಜಾರಿಯ ಕೈವಾಡ ಇರುವುದು ತಿಳಿದು ಬಂದಿತ್ತು.