ನವದೆಹಲಿ, ಅ.30 (DaijiworldNews/PY): "ಪುಲ್ವಾಮ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡ ಹಿನ್ನೆಲೆ ಕೈ ನಾಯಕರು ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ತನ್ನ ಕೈ ಇದೆ ಎಂದು ಒಪ್ಪಿಕೊಂಡಿದೆ. ಈಗ, ಪಿತೂರಿ ಸಿದ್ಧಾಂತಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮತ್ತು ಇತರರು ದೇಶದ ಜನರೊಂದಿಗೆ ಕ್ಷಮೆಯಾಚಿಸಬೇಕು" ಎಂದು ತಿಳಿಸಿದ್ದಾರೆ.
"ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದೆ ಪ್ರಧಾನಿ ಮೋದಿ ಅವರ ಕೈವಾಡವಿದೆ ಎಂದು ಕೈ ನಾಯಕರು ಈ ಹಿಂದೆ ಆರೋಪ ಮಾಡಿದ್ದರು. ಆದರೆ, ಈ ಬಗ್ಗೆ ಇಮ್ರಾನ್ ಖಾನ್ ಸರ್ಕಾರ ಬಹಿರಂಗವಾಗಿ ತಿಳಿಸಿದೆ. ಹಾಗಾಗಿ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು" ಎಂದಿದ್ದಾರೆ.
"ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು, ಪುಲ್ವಾಮ ದಾಳಿಯಲ್ಲಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಮೇಲೆ ಆರೋಪಿಸಿದ್ದರು. ಬಿಜೆಪಿಯು, ದೇಶದ ಸಿಆರ್ಪಿಎಫ್ ಯೋದರ ಮೇಲಿನ ದಾಳಿಯಿಂದಾಗಿ ಲಾಭ ಪಡೆದುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೇ, ವಿರೋಧ ಪಕ್ಷದ ನಾಯಕರು ಕೂಡಾ ಕೇಂದ್ರ ಹಾಗೂ ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿತ್ತು" ಎಂದು ಹೇಳಿದ್ದಾರೆ.
ಪಾಕಿಸ್ತಾನ ಸಂಸತ್ನಲ್ಲಿ ಮಾತನಾಡಿದ ಸಚಿವ ಫವಾದ್ ಚೌಧರಿ, "ಭಾರತದ ಗಡಿಯೊಳಕ್ಕೆ ನುಗ್ಗಿ ದಾಳಿ ಮಾಡಿದ್ದೇವೆ. ಇಮ್ರಾನ್ ಖಾನ್ ಸರ್ಕಾರದ ಬಹುದೊಡ್ಡ ಸಾಧನೆಯೆಂದರೆ ಅದು ಪುಲ್ವಾಮಾ ದಾಳಿ. ಪಾಕಿಸ್ತಾನದಲ್ಲೇ ಈ ದಾಳಿಯ ಯೋಜನೆ ತಯಾರಾಗಿತ್ತು. ಇದರ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ಸಲ್ಲಬೇಕು" ಎಂದು ಹೇಳಿದ್ದರು.