ಪಾಟ್ನಾ, ಅ.30 (DaijiworldNews/PY): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಒತ್ತಾಯಿಸಿರುವ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು, ನಿರುದ್ಯೋಗ ಹಾಗೂ ವಲಸೆ ವಿಚಾರಗಳ ಬಗ್ಗೆ ಮಾತನಾಡುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗೌರವಾನ್ವಿತ ನಿತೀಶ್ ಜಿ ಅವರು ಬಿಹಾರದಲ್ಲಿ 15 ವರ್ಷಗಳ ಆಳ್ವಿಕೆಯಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳಳನ್ನು ನಾಶಪಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಎರಡು ತಲೆಮಾರುಗಳ ವರ್ತಮಾನ ಹಾಗೂ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಆದ್ದರಿಂದ ಅವರು ಎಂದಿಗೂ ನಿರುದ್ಯೋಗ, ಉದ್ಯೋಗ, ಕಾರ್ಖಾನೆಗಳು, ಹೂಡಿಕೆ ಹಾಗೂ ವಲಸೆಯ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಈ ವಿಷಯಗಳ ಬಗ್ಗೆ ಮಾತನಾಡಬೇಕು ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ನಿತೀಶ್ ಕುಮಾರ್ ಅವರು ನನ್ನನ್ನು ಟೀಕಿಸುವ ಮೂಲಕ ಆರು ಜನ ಒಡಹುಟ್ಟಿದವರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಮೂಲಕ ಅವರು ಮಹಿಳೆ ಹಾಗೂ ನನ್ನ ತಾಯಿಯ ಭಾವನೆಳಿಗೆ ಅವಮಾನ ಮಾಡಿದ್ದಾರೆ. ಅವರು ಮೊದಲು ಟೀಕೆ ಮಾಡುವುದನ್ನು ಬಿಟ್ಟು ನಿರುದ್ಯೋಗ ಹಾಗೂ ವಲಸೆಯ ವಿಚಾರವಾಗಿ ಮಾತನಾಡಲಿ" ಎಂದಿದ್ದಾರೆ.
"ನಮ್ಮ ವಿರುದ್ದವಾಗಿ ನಿತೀಶ್ ಅವರು ಏನು ಹೇಳಿದರೂ ಕೂಡಾ ನಮಗೆ ಆಶೀರ್ವಾದ ಎಂದುಕೊಳ್ಳುತ್ತೇವೆ. ಅವರು ನಮ್ಮ ನಿಂದಿಸುವ ಮುಖೇನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.