ನವದೆಹಲಿ, ಅ.30 (DaijiworldNews/PY): ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸೌದಿ ಅರೇಬಿಯಾ ನೋಟುಗಳಲ್ಲಿ ತಪ್ಪಾಗಿ ಮುದ್ರಿಸಲಾಗಿದ್ದು, ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ವಿರೋಧ ವ್ಯಕ್ತಪಡಿಸಿದೆ.
ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದಿಂದ ಬೇರ್ಪಡಿಸಿದಂತೆ ಕಾಣಿಸುತ್ತಿತ್ತು. ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿದ್ದು, ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸೌದಿ ಅರೇಬಿಯಾದ ಅಧಿಕೃತ ಹಾಗೂ ಕಾನೂನುಬದ್ದ ನೋಟಿನಲ್ಲಿ ತಪ್ಪಾಗಿ ಮುದ್ರಿಸಿರುವ ಕಾರಣ ನವದೆಹಲಿ ಹಾಗೂ ರಿಯಾದ್ನಲ್ಲಿರುವ ಅವರ ರಾಯಭಾರಿ ಅಧಿಕಾರಿಗಳ ಬಳಿ ಪ್ರತಿಭಟನೆ ದಾಖಲಿಸಿದ್ದೇವೆ. ಸೌದಿ ಕಡೆಯಿಂದ ತುರ್ತು ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸಿದ್ದಾರೆ. ಅರಬ್ ರಾಷ್ಟ್ರದ ಮಿತ್ರರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ವಿಶಾಲವಾದ ರಾಜತಾಂತ್ರಿಕ ಮಾತುಗಳನ್ನಾಡಿದ್ದಾರೆ.
ಪ್ರಧಾನಿ ಮೋದಿ ಅವರು ಕಳೆದ ವರ್ಷ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ವೈಯುಕ್ತಿಕವಾಗಿ ಸ್ವಾಗತಿಸಿದ್ದರು.
ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಈ ಭೇಟಿಯನ್ನು, ಸೌದಿ ದೊರೆ ಸಲ್ಮಾನ್ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ದ್ವಿಪಕ್ಷೀಯ ಸಂಬಂಧಗಳಲ್ಲಿ ಇದೊಂದು ಹೊಸ ಅಧ್ಯಾಯ ಎಂದು ತಿಳಿಸಿದ್ದರು.
ಈಗಾಗಲೇ ಭಾರತ ಸೌದಿ ಅರೇಬಿಯಾದೊಂದಿಗೆ ಇಂಧನ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತ ವಿಶ್ವದ ಮೂರನೇ ಅತೀ ದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ.