ಶ್ರೀನಗರ, ಅ.30 (DaijiworldNews/PY): "ಈಶಾನ್ಯದ ಅನೇಕ ರಾಜ್ಯಗಳು ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ವಿಶೇಷ ಕಾನೂನುಗಳನ್ನು ಹೊಂದಿದ್ದು, ದೇಶದ ಇತರ ಭಾಗಗಳಿಂದ ಜನರು ಅಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ, ಇದೇ ರೀತಿಯಾದ ಕಾನೂನುಗಳನ್ನು ಜಮ್ಮು-ಕಾಶ್ಮೀರ ಏಕೆ ಹೊಂದಿಲ್ಲ?" ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಕೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, "ಸಿಕ್ಕಿಂ ಸೇರಿದಂತೆ ಹಿಮಾಚಲ ಪ್ರದೇಶ, ಮೇಘಾಲಯ, ನಾಗಲ್ಯಾಂಡ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಂತಹ ಅನೇಕ ರಾಜ್ಯಗಳಿವೆ. ಅಲ್ಲಿ ಯಾವುದೇ ಭಾರತೀಯರು ಹೋಗಿ ಇಂದಿಗೂ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
"ಈ ಕಾನೂನುಗಳ ಬಗ್ಗೆ ನಾವು ಮಾತನಾಡಿದರೆ ನಾವು ಮಾತ್ರ ರಾಷ್ಟ್ರ ವಿರೋಧಿಗಳಾಗುವುದು ಏಕೆ?. ಇತರೆ ರಾಜ್ಯಗಳು ಇದೇ ರೀತಿಯಾದ ಧ್ವನಿ ಎತ್ತಿದಾಗ ಮಾಧ್ಯಮಗಳಲ್ಲಿ ಏಕೆ ಚರ್ಚೆಯಾಗುವುದಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಅಸ್ತಿತ್ವದ ಉಳಿವಿಗಾಗಿ ಹಾಗೂ ನಮ್ಮ ನಾಳೆಗಳಿಗಾಗಿ ಹೋರಾಟ" ಎಂದಿದ್ದಾರೆ.
"ಬಿಜೆಪಿ ಆಡಳಿತದ ಕೇಂದ್ರವು, ನಮ್ಮನ್ನು ಬೇರೆ ಮಾಡಲು ಹಾಗೂ ಅಶಕ್ತರನ್ನಾಗಿಸಲು ಎಲ್ಲಾ ರೀತಿಯಾದ ಉಪಾಯಗಳನ್ನು ಮಾಡುತ್ತಿದೆ" ಎಂದು ಹೇಳಿದ್ದಾರೆ.
"ದೆಹಲಿವಾಲಾಗಳು ಬಯಸುವುದಾದರೂ ಏನು?. ಮುಖ್ಯವಾಹಿನಿಯಿಂದ ನಾವು ತೊರೆಯಬೇಕೆಂದು ಅವರು ಬಯಸುತ್ತಾರೆಯೇ?. ನಾವು ನಮ್ಮ ಅಸ್ತಿತ್ವ ಹಾಗೂ ನಮ್ಮ ಉಳಿವಿಗಾಗಿ ಹೋರಾಡುತ್ತಿದ್ದೇವೆ" ಎಂದಿದ್ದಾರೆ.
"ಶಾಂತಿಯುತ ಮತ್ತು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಅಪರಾಧವಲ್ಲ. ಇಂದು ಹೊಸ ಭೂ ಕಾನೂನುಗಳ ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಆದರೆ, ಅದಕ್ಕೆ ಅನುಮತಿ ಇಲ್ಲ. ಹಾಗಾದರೆ ನಾವು ಸಂವಿಧಾನಬದ್ದವಾಗಿ ಹಾಗೂ ಶಾಂತಿಯುತವಾಗಿ ನಮ್ಮ ಹಕ್ಕನ್ನು ಕೇಳುವುದು ತಪ್ಪಾ?" ಎಂದು ಕೇಳಿದ್ದಾರೆ.