ನವದೆಹಲಿ, ಅ.30 (DaijiworldNews/PY): "ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಚೀನಾದೊಂದಿಗಿನ ಮಿಲಿಟರಿ ಹಾಗೂ ಭಾರತ-ಅಮೇರಿಕಾ ನಡುವಿನ 2+2 ಮಾತುಕತೆಗೆ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದು ಭಾರತ ಹೇಳಿದೆ.
ಚೀನಾದೊಂದಿಗಿನ ಮುಂದಿನ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಅವರು, "ಮಿಲಿಟರಿ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದವನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರೂ ಒಪ್ಪಿಕೊಂಡಿದ್ದಾರೆ. ಸಾಧ್ಯವಾದಷ್ಟು ಬೇಗ ಸೇನೆಯನ್ನು ಹಿಂತೆಗೆದುಕೊಳ್ಳಲು ಪರಸ್ಪರ ಒಪ್ಪಿಗೆಯನ್ನು ಪಡೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಮುಂದಿನ ಸುತ್ತಿನ ಮಾತುಕತೆಗೆ ಸಂಬಂಧಿಸಿದಂತೆ ಆ ಬಗ್ಗೆ ಯಾವಾಗ ಮಾಹಿತಿ ಹಂಚಿಕೊಳ್ಳಬಹುದು ಎಂದು ಹೇಳುತ್ತೇವೆ. ಇದಕ್ಕೂ ಹಾಗೂ ಬಾಹ್ಯ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಇತ್ತೀಚಿಗೆ ನಡೆದ 2 + 2 ಸಂವಾದಕ್ಕೆ ಸಂಬಂಧಿಸಿದಂತೆ, ಇಂಡೋ-ಪೆಸಿಫಿಕ್ ಪ್ರದೇಶವು ನಮ್ಮ ಮಾತುಕತೆಯ ಒಂದು ನಿರ್ದಿಷ್ಟ ಕೇಂದ್ರವಾಗಿದೆ. ಈ ಪ್ರದೇಶದ ಎಲ್ಲಾ ದೇಶಗಳಿಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಮಹತ್ವವನ್ನು ನಾವು ಪುನರುಚ್ಚರಿಸಿದ್ದೇವೆ. ನಿಯಮ-ಆಧಾರಿತ ಅಂತರಾಷ್ಟ್ರೀಯ ಕ್ರಮವನ್ನು ಎತ್ತಿಹಿಡಿಯುವುದು, ಅಂತರಾಷ್ಟ್ರೀಯ ಸಮುದ್ರಗಳಲ್ಲಿ ಸಂಚರಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು, ಮುಕ್ತ ಸಂಪರ್ಕವನ್ನು ಉತ್ತೇಜಿಸುವುದು ಮತ್ತು ಎಲ್ಲಾ ರಾಜ್ಯಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ಮೂಲಕ ಮಾತ್ರ ಇದು ಸಾಧ್ಯ" ಎಂದಿದ್ದಾರೆ
ಅ.27ರಂದು ಭಾರತ-ಅಮೇರಿಕಾ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಹಾಗೂ ನಿರ್ಣಾಯಕ ಮಾಹಿತಿಯ ವಿನಿಮಯದ ಬಗ್ಗೆ ಬಿಇಸಿಎಗೆ ಸಹಿ ಹಾಕಿದ್ದರು.