ಚಿಕ್ಕಮಗಳೂರು,ಅ. 29 (DaijiworldNews/HR): ಈಗಾಗಲೇ ಚುನಾವಣೆಗೂ ಮುನ್ನವೇ ಬಿಜೆಪಿ ಮೊದಲ ಸ್ಥಾನಲ್ಲಿದೆ. ವಿಧಾನಸಭೆಯಲ್ಲಿ ನಮಗೆ 117 ಸ್ಥಾನವಿದೆ ಹಾಗಾಗಿ ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ ಒಪ್ಪಂದದ ಅಗತ್ಯವಿಲ್ಲ, ಒಳಒಪ್ಪಂದ ಮಾಡಿದರೆ ನಾವು ಗಟ್ಟಿಯಾಗಲ್ಲ, ರಾಷ್ಟ್ರೀಯ ಪಕ್ಷವೊಂದು ಯಾಕೆ ಒಳಒಪ್ಪಂದ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ಎರಡೂ ಕಡೆಯೂ ಕಾಂಗ್ರೆಸ್ ನಮಗೆ ಪ್ರಬಲ ಸ್ಪರ್ಧಿ, ಜೆಡಿಎಸ್ ಗೆ ಮೂರನೇ ಸ್ಥಾನ. ಆರ್.ಆರ್.ನಗರ 50 ಸಾವಿರ, ಶಿರಾ 15-20 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಶಿರಾದಲ್ಲಿ ಹತ್ತಾರು ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಗೆಲ್ಲಿಸಿದ್ದೇವೆ. ಜಯಚಂದ್ರ ಎರಡು ಬಾರಿ ಗೆದ್ದರೂ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಕುಮಾರಸ್ವಾಮಿ ಸರ್ಕಾರವಿದ್ದಾಗಲೂ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಯಡಿಯೂರಪ್ಪ ಸಮಸ್ಯೆಗಳಿಗೆ ಉತ್ತರಿಸಿದ್ದಾರೆ ಎಂದರು.