ನವದೆಹಲಿ, ಅ.29 (DaijiworldNews/PY): ವಾಯು ಮಾಲಿನ್ಯವನ್ನು ಅಪರಾಧವೆಂದು ಪರಿಗಣಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅನುಮೋದನೆಯ ಬಳಿಕ ಈ ಸುಗ್ರೀವಾಜ್ಞೆ ಜಾರಿಗೆ ಬಂದಿದ್ದು, ವಾಯು ಮಾಲಿನ್ಯಗೊಳಿಸುವವರಿಗೆ 1 ಕೋಟಿ.ರೂ.ವರೆಗೆ ದಂಡ ಹಾಗೂ ಐದು ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬೆಳೆ ತ್ಯಾಜ್ಯ ಸುಡುವುದರ ವಿರುದ್ದ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಸಂದರ್ಭ, ದೆಹಲಿ-ಎನ್ಸಿಆರ್ನಲ್ಲಿನ ವಾಯುಮಾಲಿನ್ಯ ತಡೆಗೆ ಕೇಂದ್ರ ಸರ್ಕಾರವು ಕಾನೂನು ಜಾರಿಗೆ ತರಲಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಸುಗ್ರೀವಾಜ್ಞೆಯ ಪ್ರಕಾರ, ದೆಹಲಿ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ಮತ್ತು ಪಕ್ಕದ ಪ್ರದೇಶಗಳಿಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು ರಚಿಸಲಾಗುವುದು.
ಇದರ ಆಯೋಗಕ್ಕೆ ಅಧ್ಯಕ್ಷರನ್ನು ಪರಿಸರ ಮತ್ತು ಅರಣ್ಯ ಸಚಿವರ ನೇತೃತ್ವದ ಸಮಿತಿಯು ಆಯ್ಕೆ ಮಾಡಲಿದ್ದು, ಇದರಲ್ಲಿ ಸಾರಿಗೆ ಮತ್ತು ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವರು ಮತ್ತು ಕ್ಯಾಬಿನೆಟ್ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.