ಚಿಕ್ಕಮಗಳೂರು, ಅ.29 (DaijiworldNews/PY): '"ಎರಡು ಬಾರಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ ಪಕ್ಷ ಯಾವುದು? ಅವರ ಪಕ್ಷದಲ್ಲಿ ಇದ್ದರೆ ಸಂಭಾವಿತ, ಪಕ್ಷ ಬಿಟ್ಟರೆ ಕ್ರಿಮಿನಲ್ಲಾ?" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಸಿ.ಟಿ.ರವಿ ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಬುಧವಾರ ಮುನಿರತ್ನ ಅವರಿಗೆ ಕ್ರಿಮಿನಲ್ ಹಿನ್ನೆಲೆಯವರು ಎಂದು ಹೇಳಿದ್ದಾರೆ. ಹಾಗಾದರೆ ಎರಡು ಬಾರಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ ಪಕ್ಷ ಯಾವುದು? ಅವರ ಪಕ್ಷದಲ್ಲಿದ್ದರೆ ಸಂಭಾವಿತರು, ಪಕ್ಷ ಬಿಟ್ಟರೆ ಕ್ರಿಮಿನಲ್ ಆಗುತ್ತಾರಾ?" ಎಂದು ಕೇಳಿದ್ದಾರೆ.
"ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಪರ ಮುನಿರತ್ನ ಅವರು ಪ್ರಚಾರ ಮಾಡಿರುವ ಬಗ್ಗೆ ಇರುವ ಹಳೆ ವಿಡಿಯೋವನ್ನು ತೆಗೆದು ನೋಡಿ. 2018ರ ಚುನಾವಣೆಯ ಸಂದರ್ಭ ಮುನಿರತ್ನ ಚಂದ್ರ, ಇಂದ್ರ ಎನ್ನುತ್ತಿದ್ದರು. ಇದೀಗ ಪಕ್ಷ ಬಿಟ್ಟ ಬಳಿಕ ಮುನಿರತ್ನ ಅವರು ಬದಲಾಗಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
"ಡಿಕೆಶಿ ಅವರು ಮುಂಬೈಗೆ ಯಾವ ಉದ್ದೇಶಕ್ಕಾಗಿ ಹೋಗಿದ್ದರು? ಮನವೊಲಿಸಿ ಕರೆತರುವುದಾಗಿ ಹೇಳಿ ಬಾಂಬೆಯಲ್ಲಿ ನಿಂತಿದ್ದರು. ಎಲ್ಲರೂ ಒಪ್ಪಿಗೆ ನೀಡಿದ್ದಾರೆ, ನಿಮ್ಮನ್ನೇ ಮಂತ್ರಿ ಮಾಡುತ್ತೇವೆ ಎಂದು ಯಾಕೆ ಸಿದ್ದರಾಮಯ್ಯ ಅವರು ಹೇಳಿದ್ದು? ಈಗ ತಮ್ಮ ಟಿಆರ್ಪಿ ಹೆಚ್ಚಿಸಲು ಬಿಜೆಪಿ ಮೇಲೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.