ಹುಬ್ಬಳ್ಳಿ, ಅ.29 (DaijiworldNews/PY): ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಾಕಷ್ಟು ಮಂದಿ ಬೀದಿಗೆ ಬಿದ್ದಿದ್ದಾರೆ. ರಾಜ್ಯದ ಸಂಸದರು ಕೇಂದ್ರದ ಗಮನ ಸೆಳೆಯುವ ಕಾರ್ಯದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಸದರ ಫೋಟೋಗಳನ್ನು ಹರಾಜು ಹಾಕುವ ಮೂಲಕ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದ ಸಂಸದರು ರಾಜ್ಯದ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಕೇಂದ್ರದ ಗಮನಸೆಳೆಯುಲ್ಲಿ ಕೂಡಾ ಸಂಸದರು ವಿಫಲರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಉಂಟಾದ ಪ್ರವಾಹದಿಂದ ಸುಮಾರು 50 ಕೋಟಿ.ರೂ ನಷ್ಟವಾಗಿದೆ. ಕೇಂದ್ರ ಸಚಿವರನ್ನು ಹಾಗೂ ರಾಜ್ಯದ ಸಂಸದರನ್ನು ಒಂದು ರೂಪಾಯಿಗೆ ಮಾರಾಟವಾಗುಂತ ಯೋಗ್ಯತೆ ಇಲ್ಲ. ಸಂಸದರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಬಳಿಕ ಸಂಸದರ ಭಾವಚಿತ್ರವನ್ನು ಹರಾಜು ಹಾಕಿದ್ದು, ಈ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚಿತ್ರವನ್ನು ಐದು ರೂಪಾಯಿಗೆ ವ್ಯಕ್ತಿಯೋರ್ವ ಖರೀದಿ ಮಾಡಿದರು. ಒಂದು ರೂಪಾಯಿ ನೀಡಿ ಸಂಸದ ಸಂಗಣ್ಣ ಕರಡಿ ಅವರ ಚಿತ್ರವನ್ನು ಬಾಲಕನೋರ್ವ ಖರೀದಿಸಿದ್ದಾನೆ.