ನವದೆಹಲಿ, ಸೆ. 28 (DaijiworldNews/MB) : ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ಭುಗಿಲೆದ್ದಿರುವ ರೈತರ ಹೋರಾಟದ ನಡುವೆಯೇ ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರು ವಿವಾದಿತ ಕೃಷಿ ತಿದ್ದುಪಡಿ ಮಸೂದೆಗಳಿಗೆ ಅಂಕಿತ ಹಾಕಿದ್ದು ಈ ಬೆನ್ನಲ್ಲೇ ದೇಶದಾದ್ಯಂತ ರೈತರ ಹೋರಾಟ ತೀವ್ರವಾಗಿದೆ. ಪಂಜಾಬ್ನಲ್ಲಿ ಪ್ರತಿಭಟನ ನಿರತ ರೈತರಿಗೆ ಬೆಂಬಲ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವಾದ ಇಂದು ಅವರ ಹುಟ್ಟೂರು ಖತ್ಕತ್ ಕಲಾನ್ನಲ್ಲಿ ದಿನವೀಡಿ ಧರಣಿ ಕೂರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಖಾರ್ ಅವರು, ರೈತರ ಮರಣ ಶಾಸನವಾದ ಈ ಮಸೂದೆಗಳ ವಿರುದ್ದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಭಗತ್ ಸಿಂಗ್ ಹುಟ್ಟೂರಲ್ಲೇ ಧರಣಿ ಕೂರಲಿದ್ದು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಕಾಂಗ್ರೆಸ್ನ ಎಲ್ಲ ಸಂಸದರು ಮತ್ತು ಶಾಸಕರು ಕೂಡಾ ಈ ಧರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ರೈತರು ರೈಲ್ ರೋಕೋ ಚಳುವಳಿ ನಡೆಸುತ್ತಿದ್ದು ರೈಲು ಹಳಿಯ ಮೇಲೆಯೇ ಧರಣಿ ಕೂತಿದ್ದಾರೆ. ಇನ್ನು ಪ್ರತಿಭಟನಕಾರರಿಗೆ ಅಲ್ಲಿಯೇ ಅಕ್ಕಪಕ್ಕದ ಮನೆಯವರು ಊಟ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಬಿಜೆಪಿಯೊಂದಿಗಿನ ಮೈತ್ರಿ ತೊರೆದಿರುವ ಅಕಾಳಿದಳ ಪಕ್ಷದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು, ರೈತ ವಿರೋಧಿ ಕೃಷಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ದಿನವಾದ ಭಾನುವಾರ ಪ್ರಭಾಪ್ರಭುತ್ವ ಹಾಗೂ ರೈತರ ಪಾಲಿಗೆ ಕರಾಳ ದಿನ ಎಂದು ಆಕ್ರೋಶಗೊಂಡಿದ್ದಾರೆ.