ನವದೆಹಲಿ, ಸೆ 22(Daijiworld News/PY): ದೇಶದ ವಿವಿದೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಹಲವು ರಾಜ್ಯ ಸರ್ಕಾರಗಳು ಮತ್ತೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಮುಂದಾಗಿವೆ.
ಸಾಂದರ್ಭಿಕ ಚಿತ್ರ
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಯಾವ ರಾಜ್ಯ/ಜಿಲ್ಲೆಗಳಲ್ಲಿ ಹೊಸ ನಿರ್ಬಂಧ ಹೇರಲಾಗಿದೆ ಎನ್ನುವ ವಿವರ ಇಲ್ಲಿದೆ:
ನವದೆಹಲಿ: ಅಕ್ಟೋಬರ್ 5ರ ತನಕ ಎಲ್ಲಾ ಶಾಲಾ-ಕಾಲೇಜುಗಳ ಬಂದ್ ಮುಂದುವರೆಯುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯ್ಪುರ: ಸೆಪ್ಟೆಂಬರ್ 21 ರ ರಾತ್ರಿ 9 ರಿಂದ ಸೆಪ್ಟೆಂಬರ್ 28 ಮಧ್ಯರಾತ್ರಿಯವರೆಗೆ ಸ್ಥಳೀಯ ಆಡಳಿತವು ರಾಯ್ಪುರದಲ್ಲಿ ಹೊಸ ಲಾಕ್ಡೌನ್ ಘೋಷಿಸಿದೆ. ರಾಯ್ಪುರದಲ್ಲಿ ಈವರೆಗೆ 26,000 ಕೊರೊನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೇ, ಪ್ರತಿದಿನ 900-1000 ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ನಿಯಂತ್ರಣ ಮಾಡಲು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸುವ ಅವಶ್ಯಕತೆ ಇದೆ ಎಂದು ತಿಳಿಸಿದೆ.
ಜೈಪುರ: ಜೋಧ್ಪುರ, ಕೋಟ, ಅಜ್ಮೀರ್, ಅಲ್ವಾರ್, ಭಿಲ್ವಾರಾ, ಬಿಕಾನೆರ್, ಉದಯಪುರ, ಸಿಕಾರ್, ಪಾಲಿ ಮತ್ತು ನಾಗೌರ್ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಸಿಆರ್ಪಿಸಿಯ ಸೆಕ್ಷನ್ 144 ಅನ್ನು ವಿಧಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಮುಂಬೈ: ಹೊಸ ನಿರ್ಬಂಧಗಳನ್ನು ವಿಧಿಸದಿದ್ದರೂ, ಸೆಪ್ಟೆಂಬರ್ 30ರವರೆಗೆ ಸೆಕ್ಷನ್ 144 ಅನ್ನು ಮುಂಬೈನಲ್ಲಿ ವಿಸ್ತರಿಸಲಾಗಿದೆ.
ನೋಯ್ಡಾ: ಸೆಕ್ಷನ್ 144 ಅನ್ನು ಸೆ.30ರವರೆಗೆ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದು, ನೂತ ನಿರ್ಬಂಧ ಹೇರಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡು: ಭಾನುವಾರದಂದು ಲಾಕ್ಡೌನ್ ಮುಂದುವರೆಸಲು ಚಿಂತನೆ ಮಾಡಿದ್ದು, ಆರೋಗ್ಯ ಸೇವೆ ಹಾಗೂ ಹಾಲು ಸರಬರಾಜಿಗೆ ಮಾತ್ರವೇ ಅವಕಾಶ ನೀಡಲು ಸರ್ಕಾರ ನಿರೀಕ್ಷಿಸುತ್ತಿದೆ ಎಂದು ವರದಿ ವಿವರಿಸಿದೆ.